ಸೂರತ್ : ಆಮ್ ಆದ್ಮಿ ಪಕ್ಷದ ನಾಯಕ ಗೋಪಾಲ ಇಟಾಲಿಯಾ ಅವರು ಸೋಮವಾರ ಗುಜರಾತಿನ ಸೂರತ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಗುಜರಾತಿನಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಎಸಗಿದ ವಿವಿಧ ಅಪರಾಧಗಳ ಸಂತ್ರಸ್ತರಿಗೆ “ನ್ಯಾಯ ದೊರಕಿಸಿಕೊಡಲು ವಿಫಲವಾದ” ಕಾರಣದಿಂದ ಪಶ್ಚಾತ್ತಾಪಕ್ಕಾಗಿ ಮತ್ತು ಜನರನ್ನು ನಿದ್ದೆಯಿಂದ ಎಬ್ಬಿಸಲು ತಮಗೆ ತಾವೇ ಬೆಲ್ಟ್‌ನಿಂದ ಹೊಡೆದುಕೊಂಡಿದ್ದಾರೆ.
ವೇದಿಕೆಯಲ್ಲಿ ಕ್ಷಮೆ ಕೋರಿದ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಗೋಪಾಲ ಇಟಾಲಿಯಾ ಅವರು, ಬಿಜೆಪಿ ನಾಯಕರೊಬ್ಬರ ಮಾನಹಾನಿ ಮಾಡಲು ಯತ್ನಿಸಿದ ಆರೋಪದ ಮೇಲೆ ಅಮ್ರೇಲಿಯಲ್ಲಿ ಪಾಟಿದಾರ ಮಹಿಳೆಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ ಘಟನೆಯನ್ನು ಉಲ್ಲೇಖಿಸಿದರು. ನಂತರ ತನ್ನ ಪ್ಯಾಂಟ್ ಬೆಲ್ಟ್ ಅನ್ನು ತೆಗೆದುಕೊಂಡು ತಮಗೆ ತಾವೇ ಹೊಡೆದುಕೊಂಡರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಇಟಾಲಿಯಾ, ತಾನು ಸಂತ್ರಸ್ತರಿಗಾಗಿ ಕಾನೂನು, ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳನ್ನು ನಡೆಸುತ್ತಿದ್ದೇನೆ ಆದರೆ “ಬಿಜೆಪಿ ಆಡಳಿತದಲ್ಲಿ ಅಧಿಕಾರಿಗಳು ಮತ್ತು ನಾಯಕರ ಭ್ರಷ್ಟ ನಂಟಿನಿಂದಾಗಿ ಜನರಿಗೆ ನ್ಯಾಯ ಪಡೆಯುವುದು ಕಷ್ಟಕರವಾಗಿದೆ ಎಂದು ಹೇಳಿದರು. ಮೋರ್ಬಿ ತೂಗು ಸೇತುವೆ ಕುಸಿತ, ವಡೋದರಾ ದೋಣಿ ಮುಳುಗಡೆ ಪ್ರಕರಣ, ವಿವಿಧ ಕಳ್ಳಬಟ್ಟಿ ದುರಂತಗಳು, ಅಗ್ನಿ ಅವಘಡಗಳು ಮತ್ತು ಸರ್ಕಾರಿ ನೇಮಕಾತಿ ಪರೀಕ್ಷೆಯ ಪತ್ರಿಕೆ ಸೋರಿಕೆ ಪ್ರಕರಣಗಳಂತಹ ಹಲವು ಘಟನೆಗಳಿಗೆ ಗುಜರಾತ್ ಸಾಕ್ಷಿಯಾಗಿದೆ, ಆದರೆ ಸಂತ್ರಸ್ತರಿಗೆ ನ್ಯಾಯವನ್ನು ಕೊಡಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ಅವರು ಸ್ವತಃ ಬೆಲ್ಟ್ ಬೀಸಿ ತಮಗೆ ತಾವೇ ಹೊಡೆದುಕೊಳ್ಳುವ ಮೊದಲು ಹೇಳಿದರು. ಅವರು ಹೊಡೆದುಕೊಳ್ಳುವಾಗ ವೇದಿಕೆಯ ಮೇಲಿದ್ದ ಮುಖಂಡರು ಅವರನ್ನು ತಡೆಯಲು ಧಾವಿಸಿದರು.
ನಂತರ, ಇಟಾಲಿಯಾ ಅವರು ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅವರು ಮತ್ತು ಇತರ ಎಎಪಿ ನಾಯಕರು ಅನೇಕ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಹೋರಾಡುತ್ತಿದ್ದಾರೆ ಮತ್ತು ಪೊಲೀಸ್ ಅಧಿಕಾರಿಗಳನ್ನೂ ಭೇಟಿ ಮಾಡಿದರು. ನ್ಯಾಯಾಲಯಕ್ಕೆ ಹೋದರು. ಆದರೆ ವ್ಯರ್ಥವಾಯಿತು ಎಂದು ಹೇಳಿದರು.
ಇಂದು ನಾನು ಅಮ್ರೇಲಿ ಘಟನೆಯ ಬಗ್ಗೆ ಮಾತನಾಡುವಾಗ ಆಘಾತಕ್ಕೊಳಗಾಗಿದ್ದೇನೆ ಮತ್ತು ಗುಜರಾತ್‌ನಲ್ಲಿ ಯಾರಿಗೂ ನ್ಯಾಯ ಸಿಗದಿರುವುದು ಹೇಗೆ ಎಂದು ಯೋಚಿಸಿದೆ. ಬಿಜೆಪಿ ನಾಯಕರು ಕ್ರೂರ ಹೇಳಿಕೆಗಳನ್ನು ನೀಡುತ್ತಾರೆ, ಅದು ಗಾಯದ ಮೇಲೆ ಉಪ್ಪು ಹಾಕುವಂತಿದೆ. ಮೊದಲು ನ್ಯಾಯವನ್ನು ಖಚಿತಪಡಿಸಿ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ