ನವದೆಹಲಿ : ವೈದ್ಯಕೀಯ ಕಾರಣಗಳಿಗಾಗಿ ಸ್ವಯಂ ಘೋಷಿತ ದೇವಮಾನವ ಮತ್ತು ಅತ್ಯಾಚಾರ ಅಪರಾಧಿ ಅಸಾರಾಂ ಬಾಪುಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ ಮತ್ತು ನ್ಯಾಯಮೂರ್ತಿ ರಾಜೇಶ ಬಿಂದಾಲ್ ಅವರಿದ್ದ ಪೀಠವು ಮಾರ್ಚ್ 31, 2025 ರ ವರೆಗೆ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು ನೀಡಿದೆ. ತಮ್ಮ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅಸಾರಾಂ ಸಲ್ಲಿಸಿದ್ದ ಮನವಿ ಇತ್ಯರ್ಥಪಡಿಸಿ ಈ ಆದೇಶ ನೀಡಿದೆ.
ವೈದ್ಯಕೀಯ ಆಧಾರದ ಮೇಲೆ ಮಾತ್ರ ಈ ವಿಚಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು.ಇಂದು, ಮಂಗಳವಾರ (ಜನವರಿ ೭) ನೀಡಲಾದ ಮಧ್ಯಂತರ ವೈದ್ಯಕೀಯ ಜಾಮೀನನ್ನು ಕೇವಲ ಮಾನವೀಯ ಆಧಾರದ ಮೇಲೆ ನೀಡಲಾಗಿದ್ದು, ಇದರಿಂದ ಅಸಾರಾಮ ಬಾಪು ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬಹುದು. ಈ ವೇಳೆ ನ್ಯಾಯಾಲಯವು ಕೆಲವು ಜಾಮೀನು ಷರತ್ತುಗಳನ್ನು ಅನುಸರಿಸುವಂತೆ ಅಸಾರಾಂ ಅವರಿಗೆ ನಿರ್ದೇಶನ ನೀಡಿತು. ಜೈಲಿನಿಂದ ಬಿಡುಗಡೆಯಾದ ನಂತರ ಅವರ ಅನುಯಾಯಿಗಳನ್ನು ಭೇಟಿ ಮಾಡದಂತೆ ನಿರ್ದೇಶಿಸಿದೆ. ಮಧ್ಯಂತರ ಜಾಮೀನು ಅವಧಿಯ ಮುಕ್ತಾಯದ ಹತ್ತಿರ ಅವರ ವೈದ್ಯಕೀಯ ಸ್ಥಿತಿಯನ್ನು ಮರುಮೌಲ್ಯಮಾಪನ ಮಾಡುವಂತೆ ಆದೇಶಿಸಿತು.
ವಕೀಲರಾದ ದೇವದತ್ತ ಕಾಮತ್ ಮತ್ತು ದಾಮ ಶೇಷಾದ್ರಿ ನಾಯ್ಡು ಮತ್ತು ವಕೀಲ ರಾಜೇಶ ಗುಲಾಬ ಇನಾಮದಾರ್ ಅವರು ಅಸಾರಾಂ ಬಾಪು ಪರವಾಗಿ ವಾದ ಮಂಡಿಸಿದರು.
ವಕೀಲರು ಅಸಾರಾಂ ಅವರ ವೃದ್ಧಾಪ್ಯ, ಹೃದಯಾಘಾತದ ಇತಿಹಾಸ ಮತ್ತು ತೀವ್ರ ಕೊಮೊರ್ಬಿಡಿಟಿಗಳನ್ನು ಉಲ್ಲೇಖಿಸಿ ತುರ್ತು ವೈದ್ಯಕೀಯ ಆರೈಕೆಗಾಗಿ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದರು.
ಈ ಮನವಿಯನ್ನು ಸರ್ಕಾರವು ವಿರೋಧಿಸಿತು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದರು. ಅಸಾರಾಂ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಕಸ್ಟಡಿಯಲ್ಲಿ ಸಾಕಷ್ಟು ವೈದ್ಯಕೀಯ ಸೌಲಭ್ಯಗಳು ಲಭ್ಯವಿದೆ ಎಂದು ಮೆಹ್ತಾ ಪ್ರತಿಪಾದಿಸಿದರು.
ವೈದ್ಯಕೀಯ ಆಧಾರದ ಮೇಲೆ ಮಾತ್ರ ಈ ವಿಚಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಜನವರಿ 2023 ರಲ್ಲಿ, ಗಾಂಧಿನಗರದ ಸೆಷನ್ಸ್ ನ್ಯಾಯಾಲಯವು 2013 ರ ಅತ್ಯಾಚಾರ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ (IPC) ವಿವಿಧ ನಿಬಂಧನೆಗಳ ಅಡಿಯಲ್ಲಿ, ಸೂರತ್ ಆಶ್ರಮದಲ್ಲಿ ಮಹಿಳಾ ಶಿಷ್ಯೆಯ ಅತ್ಯಾಚಾರಕ್ಕಾಗಿ ಅಸಾರಾಂ ಬಾಪುನನ್ನು ದೋಷಿ ಎಂದು ಘೋಷಿಸಿತು.
ಈ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧದ ಮೇಲ್ಮನವಿ ಗುಜರಾತ್ ಹೈಕೋರ್ಟ್‌ನಲ್ಲಿ ಬಾಕಿ ಇದೆ.
ಈ ಮಧ್ಯೆ, ಜೈಲಿನಿಂದ ಮಧ್ಯಂತರ ಬಿಡುಗಡೆ ಕೋರಿ ಅಸಾರಾಂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ವರ್ಷದ ಆಗಸ್ಟ್‌ನಲ್ಲಿ, ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವ ಮನವಿಯನ್ನು ತಿರಸ್ಕರಿಸಿತು. ಶಿಕ್ಷೆಯ ವಿರುದ್ಧದ ಮೇಲ್ಮನವಿ ಬಾಕಿ ಉಳಿದಿರುವಾಗ ಅಸಾರಾಂ ಬಾಪುವನ್ನು ಜೈಲಿನಿಂದ ಮಧ್ಯಂತರ ಬಿಡುಗಡೆಗೆ ಅನುಮತಿಸಲು ಯಾವುದೇ ಅಸಾಧಾರಣ ಕಾರಣವಿಲ್ಲ ಎಂದು ಹೈಕೋರ್ಟ್ ಹೇಳಿತು.
ನಂತರ ಅಸಾರಾಂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. 2023 ರಲ್ಲಿ ಗಾಂಧಿನಗರ ನ್ಯಾಯಾಲಯವು ತನಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಅಸಾರಾಂ ಮಾಡಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ