ಶಿರಸಿ : ನಗರದ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿದಂತೆ ಹೋರಾಟಗಾರ ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಎಲ್ಲ ಹೋರಾಟಕ್ಕೆ, ಉಪವಾಸ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಅವರು ಸಮಾಜಕ್ಕೆ ಒಳ್ಳೆಯದಾಗುವ ಯಾವುದೇ ನಿರ್ಣಯ ಕೈಗೊಂಡರೂ ಅದನ್ನು ನಾನು ಬೆಂಬಲಿಸುತ್ತೇನೆ. ಜಿಲ್ಲಾ ಬಿಜೆಪಿ ಸಹ ಈ ನಿಟ್ಟಿನಲ್ಲಿ ಸದಾ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಡೆದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ಶಿರಸಿ ಹೈಟೆಕ್ ಆಸ್ಪತ್ರೆ ಕುರಿತು ಅನಂತಮೂರ್ತಿ ಹೆಗಡೆ ಪ್ರಾರಂಭಿಸಿದ ಈ ಉಪವಾಸ ಸತ್ಯಾಗ್ರಹಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ಆಸ್ಪತ್ರೆ ಬಗ್ಗೆ ಮುಂದಿನ ಹೋರಾಟದ ಕುರಿತು ನಿಮ್ಮ ಸಮಿತಿ ಜೊತೆ ಚರ್ಚಿಸಿ ರೂಪುರೇಷೆ ರೂಪಿಸಿಕೊಳ್ಳಿ. ಆಸ್ಪತ್ರೆಯ ಒಳಿತಿಗೆ ನೀವು ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ನನ್ನ ಬೆಂಬಲ ಇದೆ. ಒಟ್ಟಿನಲ್ಲಿ ಶಿರಸಿಯಲ್ಲಿ ಒಂದು ಹೈಟೆಕ್ ಆಸ್ಪತ್ರೆ ನಿರ್ಮಾಣ ಆಗಲೇಬೇಕು. ಈ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುವುದಕ್ಕಾಗಿಯೇ ಜಿಲ್ಲೆಯ ಬಿಜೆಪಿ ಹಿರಿಯ ನಾಯಕರೆಲ್ಲರೂ ಇಲ್ಲಿಗೆ ಬಂದಿದ್ದೇವೆ. ಬಿಜೆಪಿ ಈ ಸತ್ಯಾಗ್ರಹವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ಹಿಂದೆ ನಾನು ಸಭಾಧ್ಯಕ್ಷನಾಗಿದ್ದಾಗ ಇಲ್ಲಿ 250 ಹಾಸಿಗೆ ಹೈಟೆಕ್ ಆಸ್ಪತ್ರೆಯನ್ನು ಮಂಜೂರಿ ಮಾಡಿಸಿದ್ದೆ. ಅದಕ್ಕೆ ಅವಶ್ಯವಿರುವ 185 ಕೋಟಿ ರೂ. ಅನುದಾನವನ್ನೂ ಮಂಜೂರಿ ಮಾಡಿಸಿದ್ದೆ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಸ್ವತಃ ಬಂದು ಭೂಮಿ ಪೂಜೆ ನೆರವೇರಿಸಿದ್ದರು. ವೇಗವಾಗಿ ನಡೆಯುತ್ತಿದ್ದ ನಿರ್ಮಾಣ ಕಾರ್ಯ ಈಗ ರಾಜ್ಯದ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನೀತಿಯಿಂದಾಗಿ ಕುಂಠಿತಗೊಂಡಿದೆ. ಆಗಬೇಕಿದ್ದ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಆಸ್ಪತ್ರೆ ವಿಷಯದಲ್ಲಿ ಆಗುತ್ತಿರುವಂತಹ ಅನ್ಯಾಯ ಜನಕ್ಕೆ ನೋವುಂಟು ಮಾಡಿದೆ ಎಂದರು.
ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕುಮಟಾದಲ್ಲಿ ಮಟ್ಲಿಸ್ಪೆಶಾಲಿಟಿ ಆಸ್ಪತ್ರೆಗೆ ಜಾಗ ನೋಡಿ ಅದಕ್ಕೆ ಬೇಕಾದ ಪ್ರಕ್ರಿಯೆಗೆ ಚಾಲನೆ ನೀಡಿದ್ದೆವು. ಆದರೆ ಘಟ್ಟದ ಮೇಲಿನ ಭಾಗದಲ್ಲಿ ಅನುಕೂಲವಾಗುವಂತೆ ಶಿರಸಿಯಲ್ಲಿ ಮಹಾತ್ವಾಕಾಂಕ್ಷೆಯ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೂ ಒಟ್ಟಾಗಿ ಪ್ರಯತ್ನಿಸಿದ್ದೇವೆ. ಆದರೆ ಈ ಆಸ್ಪತ್ರೆ ಕೆಲಸ ನಿಂತು ಹೋಗುತ್ತದೆಯೇನೋ ಎನ್ನುವಂತಹ ಆತಂಕದ ಸ್ಥಿತಿ ಎದುರಾಗಿದೆ. ರಾಜ್ಯ ಸರ್ಕಾರ ಯೋಜನೆ ಮಂಜೂರಾತಿಯನ್ನು ಯಾವ ಹಿನ್ನೆಲೆಯಲ್ಲಿ ಮಾಡಿದೆಯೋ ಅದೇ ಮಟ್ಟದ ಅನುದಾನವನ್ನೂ ಸಹ ಆಸ್ಪತ್ರೆ ಸಂಪೂರ್ಣವಾಗಿ ಮುಗಿಯುವ ತನಕ ನೀಡಬೇಕು ತಾಲೂಕು ಕೇಂದ್ರದ ಆಸ್ಪತ್ರೆ ಎಂದೋ ಅಥವಾ ಇನ್ಯಾವುದೋ ಕಾರಣ ನೀಡಿ ಅನುದಾನ ಕಡಿತ ಮಾಡಬಾರದು. ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಉಪವಾಸ ಸತ್ಯಾಗ್ರಹ ನಡೆಸಿ ಮಾತನಾಡಿದ ಹೋರಾಟಗಾರ ಅನಂತಮೂರ್ತಿ ಹೆಗಡೆ, ಶಿರಸಿ ಹೈಟೆಕ್ ಆಸ್ಪತ್ರೆ ವಿಚಾರದಲ್ಲಿ ಕ್ಷೇತ್ರದ ಶಾಸಕರು ಸತ್ಯವನ್ನು ಜನರೆದುರು ಹೇಳಬೇಕು. ಶಾಸಕರು ಈ ವಿಷಯದಲ್ಲಿ ಮೌನವಾಗಿರುವುದು ಅವರಿಗೆ ಶೋಭೆಯಲ್ಲ. ಆಸ್ಪತ್ರೆಯ ಅನುದಾನದಲ್ಲಿ ಯಾವುದೇ ರೀತಿಯ ಕಡಿತ ಮಾಡದೆ, ಈ ಹಿಂದೆ ಮಂಜೂರಾದಂತೆ ಹೈಟೆಕ್ ಸೌಲಭ್ಯದ ಆಸ್ಪತ್ರೆ ಶೀಘ್ರ ನಿರ್ಮಾಣವಾಗಿ ಅದರ ಸೇವೆ ಜನಸಾಮಾನ್ಯರಿಗೂ ದೊರೆಯುವಂತಾಗಬೇಕು ಎಂದು ಒತ್ತಾಯಿಸಿದರು.
ಪ್ರಮುಖವಾಗಿ ನಾವು ಮೂರು ಬೇಡಿಕೆಗಳನ್ನು ಮುಂದಿಟ್ಟು ಅದನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಮೊದಲನೆಯದಾಗಿ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ ಕುರಿತಾಗಿ ಸರ್ಕಾರ ಮತ್ತು ಶಾಸಕರು ಸತ್ಯ ಹೇಳಬೇಕು. ಹಿಂದೆ ನಿಗದಿಯಾಗಿದ್ದ 30 ಕೋಟಿ ರೂಪಾಯಿ ಹಣದಲ್ಲಿ ಆಸ್ಪತ್ರೆಗೆ ಬೇಕಾದ ಎಂ.ಆರ್.ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಕ್ಯಾತಲ್ಯಾಬ್, ಹಾರ್ಟ್ ಅಪರೇಷನ್ ಸೌಲಭ್ಯ, ತುರ್ತು ಚಿಕಿತ್ಸೆಯ ಟ್ರಾಮಾ ಸೆಂಟರ್, ಎಲ್ಲಾ ಸೌಲಭ್ಯ ಕೂಡಾ ತಪ್ಪದೇ ಬರಬೇಕು. ಈಗಾಗಲೆ 80% ಕೆಲಸ ಆಗಿರುವುದರಿಂದ ಸಲಕರಣೆ ಟೆಂಡರ್, ಸ್ಪೆಷಲಿಸ್ಟ್ ವೈದ್ಯರ ನೇಮಕ ತಕ್ಷಣ ಆಗಬೇಕು. ಎರಡನೆಯದಾಗಿ ಈಗಿರುವ ಸಾರ್ವಜನಿಕ ಅಸ್ಪತ್ರೆಯಲ್ಲಿ ಸುಮಾರು 2 ವರ್ಷಗಳಿಂದ ಜನರಲ್ ಫಿಜೀಷಿಯನ್ ಇಲ್ಲ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಅಕ್ಷಮ್ಯ. ಹೀಗಾಗಿ ಬಡ ರೋಗಿಗಳ ಅನುಕೂಲಕ್ಕಾಗಿ ತಕ್ಷಣ ಜನರಲ್ ಫಿಜಿಷೀಯನ್ ನೇಮಕ ಆಗಬೇಕು ಎಂಬುದು ನಮ್ಮ ಹಕ್ಕೊತ್ತಾಯವಾಗಿದೆ ಎಂದರು.
ಮೂರನೆಯದಾಗಿ ಸರ್ಕಾರ ಆಯುಷ್ಮಾನ ರೆಫರಲ್ ಲೆಟರ್ ನೀಡುವುದನ್ನು ಶಿರಸಿಯಲ್ಲೇ ಕೊಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು. ಶಿರಸಿ ಹಾಗೂ ಸಮೀಪದ ತಾಲೂಕುಗಳ ನೂರಾರು ಜನ ಪ್ರತಿನಿತ್ಯ ಕಾರವಾರದ ಜಿಲ್ಲಾ ಆಸ್ಪತ್ರೆಯ ಮುಂದೆ ಆಯುಷ್ಮಾನ್ ಕಾರ್ಡ್ ರೆಫರಲ್ ಲೆಟರ್ ಪಡೆಯಲು ಸರದಿಯಲ್ಲಿ ದಿನಗಟ್ಟಲೆ ಕಾಯಬೇಕಿದೆ. ತಮ್ಮ ಕುಟುಂಬದ ಸದಸ್ಯರನ್ನು ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಆಸ್ಪತ್ರೆಯಲ್ಲಿ ದಾಖಲಿಸಿ ಸರ್ಕಾರದ ಆಯುಷ್ಮಾನ ಕಾರ್ಡ್ ರೆಫರಲ್ ಪತ್ರಕ್ಕಾಗಿ ಕಾರವಾರದ ಜಿಲ್ಲಾಸ್ಪತ್ರೆಯ ಮುಂದೆ ಸರದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದಾರೆ. ರೆಫರಲ್ ಪತ್ರಕ್ಕೆ ಸಹಿ ಹಾಕುವುದು 2 -3 ದಿವಸ ವಿಳಂಬವಾಗುತ್ತಿದೆ. ಹೀಗಾದರೆ ತುರ್ತು ಚಿಕಿತ್ಸೆಯ ಅಗತ್ಯ ಇರುವ ರೋಗಿಗಳಿಗೆ ಸಕಾಲದಲ್ಲಿ ಹೇಗೆ ಚಿಕಿತ್ಸೆ ದೊರೆಯುತ್ತದೆ ಎಂದು ಪ್ರಶ್ನಿಸಿದರು. ರೋಗಿಯ ಜೊತೆ ಇರುವವರು ಕಾರವಾರಕ್ಕೆ ಹೋಗಿ ಮೂರು ದಿನ ಆಸ್ಪತ್ರೆ ಬಾಗಿಲು ಕಾಯಬೇಕಾಗಿದೆ. ಹೀಗಾಗಿ ಸರ್ಕಾರ ಆಯುಷ್ಮಾನ್ ರೆಫರಲ್ ಲೆಟರ್ ಅನ್ನು ಶಿರಸಿಯಲ್ಲೇ ಕೊಡಲು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಇಂದಿನ ಈ ಹೋರಾಟ ಮತ್ತು ಉಪವಾಸ ಸತ್ಯಾಗ್ರಹ ಕೇವಲ ಸಾಂಕೇತಿಕವಷ್ಟೇ. ಮುಂದೆಯೂ ಈ ವಿಚಾರದಲ್ಲಿ ಇನ್ನಷ್ಟು ಪ್ರಬಲವಾಗಿ ಹೋರಾಟ ನಡೆಸಲಾಗುವುದು ಎಂದರು.
.
ಹೋರಾಟಕ್ಕೆ ಸಾಥ್ ನೀಡಿದ ಬಿಜೆಪಿ ಧುರೀಣರು…..
ಅನಂತಮೂರ್ತಿ ಹೆಗಡೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ, ಮಾಜಿ ಶಾಸಕರಾದ ಶಿವಾನಂದ ನಾಯ್ಕ, ವಿವೇಕಾನಂದ ವೈದ್ಯ, ಕೆಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ, ಬಿಜೆಪಿ ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಶಿರಸಿ ನಗರಾಧ್ಯಕ್ಷ ಆನಂದ ಸಾಲೇರ್, ಸಿದ್ದಾಪುರ ತಾಲೂಕು ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ಕುಮಟಾ ಮಂಡಲಾಧ್ಯಕ್ಷ ಜಿ.ಐ.ಹೆಗಡೆ, ಅಂಕೋಲಾ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಶಿರಸಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್, ನಗರ ಪ್ರಧಾನ ಕಾರ್ಯದರ್ಶಿ ನಾಗರಾಜ ನಾಯ್ಕ, ಇತರ ಬಿಜೆಪಿ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ರಾಜ್ಯ ಸರ್ಕಾರಕ್ಕೆ ಮನವಿ….
ಸ್ಥಳೀಯ ಶಾಸಕರಾದ ಭೀಮಣ್ಣ ನಾಯ್ಕ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದರ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರು ಮನವಿ ಸ್ವೀಕರಿಸಿದರು. ಸಹಾಯಕ ಆಯುಕ್ತರ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವರು, ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಆಸ್ಪತ್ರೆ ವಿಚಾರದಲ್ಲಿ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲು ಹೋರಾಟಗಾರರು ತೀರ್ಮಾನಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ಆರೋಗ್ಯದ ವಿಷಯದಲ್ಲಿ ರಾಜ್ಯ ಸರ್ಕಾರದ ಅನಾಸಕ್ತಿ ಸರಿಯಲ್ಲ. ಆರೋಗ್ಯ ಎಲ್ಲರ ಹಕ್ಕು. ಜನರಿಗೆ ಅತ್ಯಗತ್ಯ ಹೈಟೆಕ್ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ತಕ್ಷಣವೇ ನಿರ್ಮಾಣ ಮಾಡಬೇಕು. ಅನಂತಮೂರ್ತಿ ಹೆಗಡೆ ನಡೆಸುತ್ತಿರುವ ಈ ಹೋರಾಟಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು. ಸಾಮಾಜಿಕ ಕಾರ್ಯಕರ್ತ ಗಂಗಾಧರ ಹೆಗಡೆ ಹುಳಸೇಮಕ್ಕಿ ಮಾತನಾಡಿ, ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಕೇಶವ ಮರಾಠೆ ಮಾತನಾಡಿದರು.
ಇದಕ್ಕೂ ಮೊದಲು ಶಿರಸಿ ನಗರದ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಶಿವಾಜಿ ಚೌಕದಲ್ಲಿರುವ ಛತ್ರಪತಿ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಮೆರವಣಿಗೆಯಲ್ಲಿ ಸಿದ್ದಾಪುರ, ಬನವಾಸಿ, ಯಲ್ಲಾಪುರ, ಮುಂಡಗೋಡು ಸೇರಿದಂತೆ ಸಾಕಷ್ಟು ಹಳ್ಳಿಗಳಿಂದಲೂ ಸಹ ಸಾರ್ವಜನಿಕರು ಪಕ್ಷಾತೀತವಾಗಿ ಭಾಗಿಯಾಗಿದ್ದರು. ಪ್ರಮುಖರಾದ ಜಯಶೀಲ ಗೌಡ, ಹಾಲಪ್ಪ ಜಕ್ಕಣ್ಣನವರ, ಮಂಜುನಾಥ ಪಾಟೀಲ, ರೇಖಾ ಹೆಗಡೆ, ಶಿವಾನಂದ ದೇಶಳ್ಳಿ, ಚಿದಾನಂದ ಹರಿಜನ, ಅನಿಲ ನಾಯಕ, ಹರೀಶ ಕರ್ಕಿ, ಅಮಿತ್ ಶೇಟ್, ಶ್ರೀಪಾದ ರಾಯ್ಸದ್, ಗಣಪತಿ ನಾಯ್ಕ, ಶೋಭಾ ನಾಯ್ಕ, ಮಹೇಶ ಕಡೆಮನೆ, ಗುರುಪ್ರಸಾದ ಅಂಬ್ಲಿಹೊಂಡ, ಆದಿತ್ಯ, ಕಾರ್ತಿಕ ಅಂಬ್ಲಿಹೊಂಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ