ಶಿರಸಿ : ಉತ್ತರ ಕನ್ನಡದ ಬಿಜೆಪಿ ಸಂಸದ ಹಾಗೂ ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಂಸದರ ಮನೆ ಅಂಗಳಕ್ಕೆ ಚಿರತೆ ನುಗ್ಗಿದ್ದು, ನಿವಾಸಕ್ಕೆ ಸೋಮವಾರ (ಜ 13) ತಡರಾತ್ರಿ ಚಿರತೆ ನುಗ್ಗಿದೆ.
ಸಂಸದ ಹೆಗಡೆ ನಿವಾಸದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಸಿಸಿಟಿವಿ ದೃಶ್ಯದಲ್ಲಿಚಿರತೆ ಬಂದಿದ್ದು ಸೆರೆಯಾಗಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಚಿರತೆ ಆಹಾರವನ್ನು ಅರಸಿಕೊಂಡು ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿರುವ ಸಂಸದ ಕಾಗೇರಿಯವರ ಮನೆ ಕಂಪೌಂಡ್ ಒಳಗೆ ನುಗ್ಗಿದೆ. ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕುಟುಂಬ ಸದಸ್ಯರು ಮನೆಯಲ್ಲಿದ್ದರು ಎಂದು ಹೇಳಲಾಗಿದೆ.
ಕಾಗೇರಿಯವರ ನಿವಾಸದ ಕಂಪೌಂಡ್ ಒಳಗೆ ನುಗ್ಗಿದ ಚಿರತೆ, ಸಾಕುನಾಯಿಯನ್ನು ಅಟ್ಟಾಡಿಸಿಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ನಾಯಿ ಚಿರತೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ತೋಟದ ಭಾಗದಿಂದ ಚಿರತೆ ಒಳಗೆ ನುಗ್ಗಿದೆ ಎನ್ನಲಾಗಿದೆ.
ರಾತ್ರಿ ಮನೆಯ ನಾಯಿ ಜೊರಾಗಿ ಕೂಗಿದ್ದರಿಂದ, ಇಂದು, ಮಂಗಳವಾರ ಬೆಳೀಗ್ಗೆ ಮನೆಯವರು ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಚಿರತೆ ಮನೆಗೆ ಬಂದ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಚಿರತೆಯ ಓಡಾಟ ಮಾಮೂಲಿ ಎನ್ನುವಂತೆ, ವಾರದ ಹಿಂದೆ ಕೂಡಾ, ಶಿರಸಿಯ ಹೊರವಲಯದಲ್ಲೂ ಚಿರತೆ, ದನಕರುಗಳ ಮೇಲೆ ದಾಳಿ ಮಾಡಿದ ಘಟನೆ ವರದಿಯಾಗಿತ್ತು.
ವಾರದ ಹಿಂದೆ, ಶಿರಸಿ ನಗರದಿಂದ ಕೇವಲ ಐದಾರು ಕಿಲೋಮೀಟರ್ ಅಂತರದಲ್ಲೇ ಇರುವ ಇಸಳೂರು ಎನ್ನುವ ಗ್ರಾಮದ ಮೇಲೆ ದಾಳಿ ಮಾಡಿದ್ದ ಚಿರತೆ ಕೊಟ್ಟಿಗೆಗೆ ನುಗ್ಗಿ ಆಕಳ ಕರುವೊಂದನ್ನು ತಿಂದು ಹಾಕಿತ್ತು. ಎರಡು ದಿನಗಳ ಹಿಂದೆ ಶಿರಸಿ ತಾಲೂಕಿನ ನೀರ್ನಳ್ಳಿ ಮನೆ ಆವರಣಕ್ಕೆ ಚಿರತೆ ಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ