ಶಿರಸಿ | ತಬಲಾ ಮಾಂತ್ರಿಕ ಝಾಕೀರ್ ಹುಸೇನಗೆ ಶ್ರದ್ಧಾಂಜಲಿ ; ಜ.19ರಂದು ʼಲಯ ವಂದನಾʼ ಕಾರ್ಯಕ್ರಮ

ಶಿರಸಿ : ತಬಲಾ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರಿಗೆ ಶಿಷ್ಯರಿಂದ, ಅಭಿಮಾನಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ʼಲಯ ವಂದನಾʼ ಕಾರ್ಯಕ್ರಮ ನಗರದ ಟಿಆರ್‌ಸಿ ಸಭಾಭವನದಲ್ಲಿ ಜ.19ರ ಸಂಜೆ 5ಕ್ಕೆ ಆಯೋಜಿಸಲಾಗಿದೆ ಎಂದು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರು ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪಂಡಿತ ಶ್ರೀ ಶ್ರೀಪಾದ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಹಾಗೂ ರಾಜದೀಪ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಪ್ರಸಿದ್ಧ ತಬಲಾ ವಾದಕ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಅವರು ಝಾಕೀರ್ ಹುಸೇನ್ ಅವರ ಶಿಷ್ಯರಾಗಿದ್ದಾರೆ, ಶಿರಸಿಗೆ ಝಾಕೀರ್ ಹುಸೇನ್ ಅವರು 1997 ಮತ್ತು 2005ರಲ್ಲಿ ಎರಡು ಬಾರಿ ಬಂದು ಕಾರ್ಯಕ್ರಮ ನೀಡಿದ್ದಾರೆ. ಈ ಕಾರಣದಿಂದ ಅವರ ನೆನಪಿನಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.

ಲಕ್ಷ್ಮೀಶರಾವ್‌ ಕಲ್ಗುಂಡಿಕೊಪ್ಪ ಮಾತನಾಡಿ, ವೇದಿಕೆಯಲ್ಲಿ ನುಡಿ ನಮನದ ಜೊತೆ ಝಾಕೀರ್ ಹುಸೇನ್‌ ಅವರ ಬದುಕಿನ ಆಯ್ದ ದೃಶ್ಯಾವಳಿ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಶೇಷಾದ್ರಿ ಅಯ್ಯಂಗಾರ ಸಂಯೋಜನೆಯಲ್ಲಿ ಜಿಲ್ಲೆಯ ತಬಲಾ ವಾದಕರಿಂದ ಲಯ ಸರ್ಗ ನಡೆಯಲಿದೆ. ತಬಲಾ ವಾದನದಲ್ಲಿ ಕಾಗೇರಿ ನಾಗಪತಿ ಹೆಗಡೆ, ವಾಜಗಾರ ಅನಂತ ಹೆಗಡೆ, ಶೇಷಾದ್ರಿ ಅಯ್ಯಂಗಾರ್, ಮಂಜುನಾಥ ಹೆಗಡೆ, ಗುರುರಾಜ ಹೆಗಡೆ, ಅಕ್ಷಯ ಭಟ್ಟ, ದಿನೇಶ ನಾಯ್ಕ್, ಡಾ.ಸಚಿನ್ ಪಂಡಿತ್, ಸುಬ್ರಹ್ಮಣ್ಯ ಶಾಸ್ತ್ರಿ, ವಿನಾಯಕ ಸಾಗರ, ಮನೋಜ ಶೇಟ್ ಮೊದಲಾದ ಕಲಾವಿದರು ಭಾಗವಹಿಸಲಿದ್ದಾರೆ.
ನಂತರ ಝಾಕೀರ್ ಹುಸೇನ್‌ ಅವರ ಪ್ರಿಯ ಶಿಷ್ಯರಲ್ಲಿ ಒಬ್ಬರಾದ, ಅರೆ ಹುಜೂರ್ ವಾಹ್, ತಾಜ್ ಭೋಲಿಯೇ ಖ್ಯಾತಿಯ ಆದಿತ್ಯ ಕಲ್ಯಾಣಪುರ ತಬಲಾ ಸೋಲೋ ಮೂಲಕ ಲಯ ವಂದನಾ ಪೂರ್ಣವಾಗಲಿದೆ. ಲೆಹರಾದಲ್ಲಿ ಅಜಯ ವರ್ಗಾಸರ ಸಹಕಾರ ನೀಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಯದೇವ ರಾವ್, ರಾಜದೀಪ ಟ್ರಸ್ಟ್‌ ಉಪಾಧ್ಯಕ್ಷ ಜೇಮ್ಸ ವಾಜ್, ವೆಂಕಟೇಶ ಬೆಂಗಳೆ, ಜಿ.ವಿ ಹೆಗಡೆ ಬಿಸಲಕೊಪ್ಪ, ಗಿರಿಧರ ಕಬ್ನಳ್ಳಿ ಇತರರು ಇದ್ದರು.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement