ಕೊಲ್ಕತ್ತಾ: ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಕೊಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ, ಕೊಲೆಯ ಪ್ರಕರಣದ ಪ್ರಮುಖ ಆರೋಪಿ ಸಂಜಯ ರಾಯ್‌ಗೆ ಕೊಲ್ಕತ್ತಾದ ವಿಚಾರಣಾ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗೆ ಮರಣದಂಡನೆ ವಿಧಿಸಲು ಕೋರಿದ್ದ ಪ್ರಾಸಿಕ್ಯೂಷನ್‌ನ ಮನವಿಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಅನಿರ್ಬನ್ ದಾಸ್ ತಿರಸ್ಕರಿಸಿದರು. ಮರಣದಂಡನೆ ವಿಧಿಸಲು ಅಗತ್ಯವಾದ “ಅಪರೂಪದಲ್ಲಿ ಅಪರೂಪ”ದ ಅಪರಾಧ ಎನ್ನುವ ವರ್ಗೀಕರಣದಡಿ ಪ್ರಸಕ್ತ ಪ್ರಕರಣ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಇದೇ ವೇಳೆ ನ್ಯಾಯಾಲಯವು, ಮೃತರ ಕುಟುಂಬಕ್ಕೆ ₹17 ಲಕ್ಷ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಆದೇಶಿಸಿತು. 57 ದಿನಗಳ ಕಾಲ ನಡೆದ ಗೌಪ್ಯ ವಿಚಾರಣೆ ನಡೆಸಿದ ನ್ಯಾಯಾಲಯವು ಜನವರಿ 18 ರಂದು ಸಂಜಯ ರಾಯ್‌ನನ್ನು ದೋಷಿ ಎಂದು ತೀರ್ಪು ನೀಡಿತ್ತು. ನಂತರ ರಾಯ್‌ಗೆ ವಿಧಿಸುವ ಶಿಕ್ಷೆಯನ್ನು ನಿರ್ಧರಿಸುವ ವಿಷಯವನ್ನು ಸೋಮವಾರಕ್ಕೆ ಮುಂದೂಡಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ರಾಯ್‌ಗೆ ಮರಣದಂಡನೆ ಸಿಕ್ಷೆ ವಿಧಿಸುವಂತೆ ಕೋರಿತ್ತು.
ಕಳೆದ ವರ್ಷ ಆಗಸ್ಟ್ 9ರಂದು ಕೋಲ್ಕತ್ತಾದ ಆರ್ ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದ 31 ವರ್ಷದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅತ್ಯಾಚಾರಕ್ಕೀಡಾಗಿ ಕೊಲೆಯಾಗಿದ್ದ ಕಿರಿಯ ವೈದ್ಯೆಯ ದೇಹವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು.
ನಂತರದೇಶದ ವಿವಿಧ ಭಾಗಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ವೃತ್ತಿಪರರ ಸುರಕ್ಷತೆಗೆ ಒತ್ತಾಯಿಸಿ ವೈದ್ಯಕೀಯ ಸಂಘಟನೆಗಳು ಮುಷ್ಕರ ನಡೆಸಿದವು.
ಪೊಲೀಸ್ ಸ್ವಯಂಸೇವಕನಾಗಿದ್ದ ಆರೋಪಿ ರಾಯ್‌ನನ್ನು ಘಟನೆಯ ಒಂದು ದಿನದ ನಂತರ ಆಗಸ್ಟ್ 10ರಂದು ಕೋಲ್ಕತ್ತಾ ಪೊಲೀಸರು ಬಂಧಿಸಿದರು. ಪ್ರಕರಣದ ತನಿಖೆಯನ್ನು ಅಂತಿಮವಾಗಿ ಕಲ್ಕತ್ತಾ ಹೈಕೋರ್ಟ್ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಗೆ ವರ್ಗಾಯಿಸಿತು.
ಪಶ್ಚಿಮ ಬಂಗಾಳದ ವಿಚಾರಣಾ ನ್ಯಾಯಾಲಯವು ರಾಯ್ ವಿರುದ್ಧ ಅತ್ಯಾಚಾರ ಮತ್ತು ಕೊಲೆಯ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿತು. ಕಳೆದ ನವೆಂಬರ್ 12ರಂದು ಆರಂಭಗೊಂಡ ವಿಚಾರಣೆಯು ಜನವರಿ 9 ರಂದು ಮುಕ್ತಾಯಗೊಂಡಿತು. ಆರೋಪಿಗೆ ಮರಣದಂಡನೆ ವಿಧಿಸುವಂತೆ ಸಿಬಿಐ ಕೋರಿತ್ತು .
ನಿಮ್ಮ ಕಾಮೆಂಟ್ ಬರೆಯಿರಿ