ಕರ್ನಾಟಕದ 9 ಸಾಧಕರಿಗೆ ಪದ್ಮ ಪ್ರಶಸ್ತಿ

ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ರಾಜ್ಯದ 9 ಸಾಧಕರಿಗೆ ಪದ್ಮ ಪ್ರಶಸ್ತಿಗಳು ಲಭಿಸಿವೆ.
ಒಬ್ಬರಿಗೆ ಪದ್ಮ ವಿಭೂಷಣ, ಇಬ್ಬರು ಸಾಧಕರಿಗೆ ಪದ್ಮಭೂಷಣ ಹಾಗೂ 6 ಜನ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ 9 ಜನರು ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪದ್ಮ ವಿಭೂಷಣ ಪ್ರಶಸ್ತಿಯನ್ನು ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಪ್ರಕಟಿಸಲಾಗಿದೆ. ನಟ ಅನಂತನಾಗ್, ಶಿಕ್ಷಣ ತಜ್ಞ ಎ. ಸೂರ್ಯಪ್ರಕಾಶ ಅವರು ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಬೆಂಗಳೂರಿನ ರಿಕ್ಕಿ ಕೇಜ್‌, ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ವಿಜಯಲಕ್ಷ್ಮಿ ದೇಶಮಾನೆ ಹಾಗೂ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಹಾಸನ ರಘು ಮತ್ತು ಪ್ರಶಾಂತ ಪ್ರಕಾಶ ಅವರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.
ಲಕ್ಷ್ಮೀನಾರಾಯಣ ಸುಬ್ರಮಣ್ಯಂ
ಚೆನ್ನೈ ಮೂಲಕ ವಯೊಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಕರ್ನಾಟಕದಲ್ಲಿ ನೆಲೆಸಿದ್ದಾರೆ. ಹೆಸರಾಂತ ಪಿಟೀಲು ವಾದಕರಾಗಿರುವ ಅವರು ಸಂಗೀತ ಸಂಯೋಜಕರೂ ಆಗಿದ್ದಾರೆ. ಅವರು ಕರ್ನಾಟಕ ಮತ್ತು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಪಿಟೀಲು ವಾದಕರು. ಸಂಗೀತದಲ್ಲಿ ಇವರ ವೃತ್ತಿಜೀವನವು 1973 ರಲ್ಲಿ ಪ್ರಾರಂಭವಾಯಿತು ಮತ್ತು ಅವರು 200 ಕ್ಕೂ ಹೆಚ್ಚು ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿದ್ದಾರೆ. ಲಕ್ಷ್ಮಿನಾರಾಯಣ ಸುಬ್ರಮಣಿಯಂ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ. ಸಂಗೀತ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆ ಪರಿಗಣಿಸಿ ಪದ್ಮವಿಭೂಷಣ ಪ್ರಶಸ್ತಿ (Padma Vibhushan award) ನೀಡಲಾಗಿದೆ.
ಅನಂತ ನಾಗ್‌
ಕನ್ನಡ ಚಲನಚಿತ್ರದ ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಒಬ್ಬರಾದ ಅನಂತ ನಾಗ್‌ ನಟರಾಗಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಲೇಖಕರಾಗಿಯೂ ಹೆಸರು ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮೂಲದವರಾದ ಅವರು, ಕನ್ನಡ ಭಾಷೆಯಲ್ಲಿ 150ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ ಅನೇಕ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.
ಎ ಸೂರ್ಯಪ್ರಕಾಶ
ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯಪ್ರಕಾಶ ಅವರು ಪ್ರಸಾರ ಭಾರತಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಸೂರ್ಯ ಪ್ರಕಾಶ ಅವರು‘ದಿ ಪಯೋನಿರ್’ನಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ, ‘ಈ ನಾಡು’ ನ್ಯೂಸ್‌ಪೇಪರ್ ಸಮೂಹದ ರಾಜಕೀಯ ಸಂಪಾದಕ, ‘ಜೀ ನ್ಯೂಸ್’ನಲ್ಲಿ ಸಂಪಾದಕ, ಬ್ಯಾಂಕಾಕ್ ಮತ್ತು ಸಿಂಗಾಪುರದಲ್ಲಿ ಪ್ರಕಟವಾಗುವ ‘ಏಷ್ಯಾ ಟೈಮ್ಸ್ ’ದೈನಿಕದಲ್ಲಿ ಇಂಡಿಯಾ ಎಡಿಟರ್, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ದೆಹಲಿ ಬ್ಯುರೋ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ಲೀಸ್ ಪಾಸ್ ಮಾಡಿ, ನನ್ನ ಲವ್ ನಿಮ್ಮ ಕೈಯಲ್ಲಿದೆ : ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯಲ್ಲಿ 500 ರೂ. ಇಟ್ಟು ವಿದ್ಯಾರ್ಥಿಯ ವಿಚಿತ್ರ ಮನವಿ...!

ಡಾ.ವಿಜಯಲಕ್ಷ್ಮೀ ದೇಶಮಾನೆ
ಕಲಬುರಗಿ ಮೂಲದ ದೇಶದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆಗೆ ಸೇರಿದರು. 1989ರಲ್ಲಿ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ ಅವರು 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್‍ಎಐಎಸ್ ಫೆಲೋಶಿಪ್‍ಗೆ ಪಾತ್ರರಾದರು. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯೂ ಆಗಿ ಕಾರ್ಯನಿರ್ವಹಿಸಿದ ಅವರು ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿದ್ದರು. ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಅಭಿಯಾನ ಆರಂಭಿಸಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ವೆಂಕಪ್ಪ ಅಂಬಾಜೀ ಸುಗಟ್ಕೇರ್
ಜಾನಪದ ಗಾಯಕರಾಗಿ ಜನಪ್ರಿಯತೆ ಪಡೆದ 81 ವರ್ಷದ ವೆಂಕಪ್ಪ ಅಂಬಾಜೀ ಸುಗಟ್ಕೇರ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ. 2024 ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ 110ನೇ ಮನ್ ಕಿ ಬಾತ್‌ನಲ್ಲಿ ವೆಂಕಪ್ಪ ಅಂಬಾಜೀ ಸುಗಟ್ಕೇರ್ ಹೆಸರನ್ನು ಉಲ್ಲೇಖಿಸಿದ್ದರು. ಸಾವಿರಕ್ಕೂ ಅಧಿಕ ತತ್ವಪದ, ದೇವಿ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿದ ಜಾನಪದ ಗಾಯಕರಾದ ಬಾಗಲೋಕಟೆಯ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭೀಮವ್ವ ದೊಡ್ಡಬಾಳಪ್ಪ
ಕೊಪ್ಪಳ ಮೂಲದ ತೊಗಲುಗೊಂಬೆಯಾಟದ ಹಿರಿಯ ಕಲಾವಿದ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. 96 ವರ್ಷ ವಯಸ್ಸಿನ ಕೊಪ್ಪಳದ ಸಾಂಪ್ರದಾಯಿಕ ಶಿಳ್ಳೇಕ್ಯಾತರ ಕುಟುಂಬದ ಭೀಮವ್ವ ತೊಗಲುಗೊಂಬೆ ಕಲಾವಿದರಾಗಿ ನಿರಂತರವಾಗಿ 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಭೀಮವ್ವ ವಿದೇಶಗಳಲ್ಲೂ ತಮ್ಮ ವೈವಿಧ್ಯಮಯ ತೊಗಲು ಗೊಂಬೆಯ ಪ್ರದರ್ಶನದಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ. ಅಮೇರಿಕ, ಇರಾನ್, ಸ್ವಿಡರ್‌ಲ್ಯಾಂಡ್, ಜಪಾನ್‌ ಮೊದಲಾದ ಕಡೆ ತೊಗಲು ಗೊಂಬೆಯಾಟದ ಪ್ರದರ್ಶನ ನೀಡಿದ್ದಾರೆ.
ರಿಕ್ಕಿ ಕೇಜ್‌
ಅಂತಾರಾಷ್ಟ್ರೀಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪಂಜಾಬಿ ಕುಟುಂಬ ಮೂಲದ ಅವರು 1981ರಲ್ಲಿ ಅಮೆರಿಕದಲ್ಲಿ ಜನಿಸಿದರು. ಅವರು 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ್ದಾರೆ. 43 ವರ್ಷದ ಅವರು ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ‘ಆಕ್ಸಿಡೆಂಟ್’, ‘ವೆಂಕಟ ಇನ್ ಸಂಕಟ’ ಹಾಗೂ ‘ಕ್ರೇಜಿ ಕುಟುಂಬ’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. 30 ದೇಶಗಳಲ್ಲಿ 100 ಮ್ಯೂಸಿಕ್ ಅವಾರ್ಡ್ಸ್‌ಗಳನ್ನು ಪಡೆದಿದ್ದಾರೆ.
ಹಾಸನ ರಘು
ಸೈನ್ಯದಲ್ಲಿದ್ದು ಸ್ವಯಂ ನಿವೃತ್ತಿಯ ನಂತರ ಹಾಸನ ರಘು ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದರು . ನೂರಾರು ಚಲನಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ವಿಭಿನ್ನವಾಗಿ ನಿರ್ದೇಶನ ಮಾಡಿದ್ದಾರೆ. ರಾಮನಗರದಲ್ಲಿ ಆತ್ಮರಕ್ಷಣೆ ಕಲೆಯ ತರಬೇತಿ ನೀಡಲು ಸಂಸ್ಥೆಯೊಂದನ್ನು ಸ್ಥಾಪಿಸಿರುವ ಅನೇಕ ಸಾಹಸ ಕಲಾವಿದರನ್ನು ತಯಾರು ಮಾಡಿದ್ದಾರೆ.
ಪ್ರಶಾಂತ ಪ್ರಕಾಶ
ಕೈಗಾರಿಕಾ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಪ್ರಶಾಂತ ಪ್ರಕಾಶ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಲ್ಲಿಸಿದ್ದ ಇಂಡಿಗೋ ವಿಮಾನಕ್ಕೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement