ಬೆಂಗಳೂರು: ಇನ್ಫೋಸಿಸ್ ಸಹ ಸಂಸ್ಥಾಪಕ ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್, ಭಾರತೀಯ ವಿಜ್ಞಾನ ಸಂಸ್ಥೆ(IISc)ಯ ನಿರ್ದೇಶಕ ಬಲರಾಮ ಮತ್ತು ಇತರ 16 ಮಂದಿ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸೋಮವಾರ ಪ್ರಕರಣ ದಾಖಲಿಸಲಾಗಿದೆ.
71ನೇ ಸಿಟಿ ಸಿವಿಲ್ ಮತ್ತು ಸೆಷನ್ ಕೋರ್ಟ್ (ಸಿಸಿಎಚ್) ನಿರ್ದೇಶನದ ಮೇರೆಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬುಡಕಟ್ಟು ಬೋವಿ ಸಮುದಾಯಕ್ಕೆ ಸೇರಿದ ದೂರುದಾರರಾದ ದುರ್ಗಪ್ಪ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಅಧ್ಯಾಪಕರಾಗಿದ್ದರು. 2014ರಲ್ಲಿ ತನ್ನನ್ನು ಹನಿ ಟ್ರ್ಯಾಪ್ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ. ಜಾತಿ ನಿಂದನೆ ಹಾಗೂ ಬೆದರಿಕೆಗೆ ಗುರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದರು.
ಈ ಪ್ರಕರಣದಲ್ಲಿ ಆರೋಪಿಗಳಾದ ಗೋವಿಂದನ್ ರಂಗರಾಜನ್, ಶ್ರೀಧರ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಬಲರಾಮ ಪಿ., ಹೇಮಲತಾ ಮ್ಹಿಷಿ, ಚಟ್ಟೋಪಾಧ್ಯಾಯ ಕೆ, ಪ್ರದೀಪ ಡಿ ಸಾವ್ಕರ್ ಮತ್ತು ಮನೋಹರನ್ ಸೇರಿದ್ದಾರೆ.
ಕ್ರಿಸ್ ಗೋಪಾಲಕೃಷ್ಣನ್ ಅವರು ಐಎಸ್ಸಿಯ ಟ್ರಸ್ಟಿ ಬೋರ್ಡ್ ಸದಸ್ಯರಾಗಿರುವ ಕಾರಣ ಅವರ ಮೇಲೂ ಕೇಸ್ ದಾಖಲಾಗಿದೆ. ಟ್ರಸ್ಟಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿರುವ ಕ್ರಿಸ್ ಗೋಪಾಲಕೃಷ್ಣನ್ ಅವರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ