ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ಷರತ್ತುಬದ್ಧ ಅನುಮೋದನೆ

ಬೆಂಗಳೂರು: ತಜ್ಞರು, ಸಂರಕ್ಷಣಾವಾದಿಗಳು, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳ ತೀವ್ರ ವಿರೋಧದ ಹೊರತಾಗಿಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಜೋಗ ಮೀಸಲು ಅರಣ್ಯದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಗೊಳ್ಳುವ ಇಂಧನ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನಾ ಯೋಜನೆ ಶರಾವತಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿದೆ. ಯೋಜನೆಗೆ 125 ಎಕರೆ ಅರಣ್ಯ ಭೂಮಿ ನೀಡುವ ಸಂಬಂಧ ಚರ್ಚೆ ನಡೆಯಿತು. ಯೋಜನೆಗೆ ಅರಣ್ಯ ಪ್ರದೇಶದ ಸುಮಾರು 16 ಸಾವಿರ ಮರಗಳನ್ನು ಕಡಿಯಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

8ರಿಂದ 9 ಸಾವಿರ ಮರ ಕಡಿಯಲು ಸೂಚನೆ, ಸಿಂಗಳಿಕಗಳಿಗೆ ಧಕ್ಕೆಯಾಗದಂತೆ ಯೋಜನೆ: 8ರಿಂದ 9 ಸಾವಿರ ಮರಗಳನ್ನು ಮಾತ್ರ ಕಡಿಯುವಂತೆ ಸೂಚನೆ ನೀಡಲಾಯಿತು. ಜೊತೆಗೆ, ಶರಾವತಿ ವನ್ಯಜೀವಿಧಾಮ ಅಪರೂಪದ ವನ್ಯಜೀವಿಯಾದ ಸಿಂಹಬಾಲ ಸಿಂಗಳಿಕಗಳ ವಾಸಸ್ಥಾನವಾಗಿದೆ. ಯೋಜನೆ ಕಾಮಗಾರಿಯಿಂದ ಅವುಗಳ ವಾಸಸ್ಥಾನಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಕೇವಲ 125 ಎಕರೆ ಅರಣ್ಯ ಪ್ರದೇಶದಲ್ಲಷ್ಟೇ ಕಾಮಗಾರಿ ನಡೆಸಬೇಕು. ಅದನ್ನು ಮೀರಿ ಯೋಜನೆ ಕೈಗೊಳ್ಳಬಾರದೆಂಬ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಲಾಯಿತು.
ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನೀಡಲಾಗಿರುವ ಅನುಮೋದನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿ ಅನುಮೋದನೆ ದೊರೆತ ನಂತರ ಯೋಜನೆ ಕಾಮಗಾರಿಗೆ ಚಾಲನೆ ದೊರೆಯಲಿದೆ. ಒಟ್ಟು 2 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಶರಾವತಿ ಪಂಪ್ಡ್‌ ಸ್ಟೋರೇಜ್‌ ವಿದ್ಯುತ್ ಉತ್ಪಾದನಾ ಯೋಜನೆ ಇದಾಗಿದೆ.
ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಪಟ್ಟಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌, ಶಾಸಕರಾದ ಪೊನ್ನಣ್ಣ, ಗಣೇಶ ಪ್ರಸಾದ, ಪುಟ್ಟಣ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಅಹಮದ್‌, ವನ್ಯಜೀವಿ ಮಂಡಳಿ ಸದಸ್ಯರು ಇದ್ದರು.

ಪ್ರಮುಖ ಸುದ್ದಿ :-   ಚಿತ್ರದುರ್ಗ | ಬಡಿದಾಡಿಕೊಂಡ ಪಿಎಸ್‌ಐ-ಬಿಜೆಪಿ ಮುಖಂಡ ; ವೀಡಿಯೊ ವೈರಲ್‌

2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ: ಮೊದಲ ಹಂತದಲ್ಲಿ 10 ಘಟಕಗಳಿಂದ ಸದ್ಯ 1 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಈ ಯೋಜನೆ 66 ಸಾವಿರ ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದೀಗ ಎರಡನೇ ಹಂತದ ಯೋಜನೆಯು 125 ಎಕರೆ ವಿಸ್ತೀರ್ಣದ ಅರಣ್ಯ ಪ್ರದೇಶದಲ್ಲಿ ಅನುಷ್ಠಾನಗೊಂಡು ಪೂರ್ಣ 2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಲಾಗಿದೆ. ಗೇರುಸೊಪ್ಪ ಮತ್ತು ಲಿಂಗನಮಕ್ಕಿ ಜಲಾಶಯಗಳಿಂದ ವಿದ್ಯುತ್‌ ಉತ್ಪಾದನಾ ಘಟಕಗಳಿಗೆ ಸುರಂಗ ಮಾರ್ಗ ನಿರ್ಮಿಸಿ ನೀರು ಹಾಯಿಸಲಾಗುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement