ಬೆಂಗಳೂರು: ತೀವ್ರ ಅನಾರೋಗ್ಯಕ್ಕೊಳಗಾಗಿ ಯಾವುದೇ ಚಿಕಿತ್ಸೆ ನೀಡಿದರೂ ಗುಣಮುಖರಾಗಲು ಸಾಧ್ಯವೇ ಇಲ್ಲದ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಮಾರಣಾಂತಿಕ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಸುಪ್ರೀಂಕೋರ್ಟ್ನ ಆದೇಶದಂತೆ ಕರ್ನಾಟಕದಲ್ಲಿ ಈ ಕಾನೂನು ಜಾರಿ ಮಾಡಲಾಗಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪೋಸ್ಟ್ ಮಾಡಿದ್ದು, “ನಮ್ಮ ಕರ್ನಾಟಕ ಆರೋಗ್ಯ ಇಲಾಖೆ, DHFWKA, ರೋಗಿಯ ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಜಾರಿಗೆ ತರಲು ಐತಿಹಾಸಿಕ ಆದೇಶವನ್ನು ಅಂಗೀಕರಿಸುತ್ತದೆ” ಎಂದು ತಿಳಿಸಿದ್ದಾರೆ. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದು, ಚೇತರಿಕೆಯೇ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿ ಇರುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಅವಕಾಶ ನೀಡುವುದನ್ನು ನಿರ್ಧರಿಸಲು ಮೂವರು ವೈದ್ಯರನ್ನು ಒಳಗೊಂಡ ಎರಡು ಮಂಡಳಿಗಳ ಸ್ಥಾಪನೆ ಮಾಡುವ ಬಗ್ಗೆಯೂ ಉಲ್ಲೇಖಿಸಲಾಗಿದೆ.
ರೋಗಿಯು ಘನತೆಯಿಂದ ಸಾಯುವ ಹಕ್ಕಿನ ಸಂಬಂಧ ಜಿಲ್ಲಾಮಟ್ಟದಲ್ಲಿ ತಜ್ಞ ವೈದ್ಯರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯು ರೋಗಿ ಯಾವುದೇ ಚಿಕಿತ್ಸೆ ನೀಡಿದರೂ ಬದುಕುಳಿಯಲ್ಲ ಎಂದು ದೃಢಪಡಿಸಿದ ನಂತರ ಘನತೆಯಿಂದ ಸಾಯಲು ಅವಕಾಶ ಕೊಡುವ ನಿರ್ಧಾರ ಕೈಗೊಳ್ಳಲಿದೆ.
ಒಬ್ಬ ರೋಗಿಯು ಗಂಭೀರ ಕಾಯಿಲೆಯಿಂದ ಅಸ್ವಸ್ಥನಾಗಿ ಚೇತರಿಕೆ ಅಥವಾ ಗುಣಮುಖರಾಗುವ ಆಶಾಭಾವನೆ ಹೊಂದಿಲ್ಲದೆ, ಸುದೀರ್ಘ ಅವಧಿಯಿಂದ ಚಿಕಿತ್ಸೆ ಪಡೆಯುತ್ತಿದ್ದರೆ ಹಾಗೂ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲದಿದ್ದ ಸಂದರ್ಭದಲ್ಲಿ ನಿಗದಿತ ಕಾರ್ಯವಿಧಾನಕ್ಕೆ ಪೂರಕವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈಗ ರಾಜ್ಯ ಸರ್ಕಾರ ಕೋರ್ಟ್ನ ನಿರ್ದೇಶನವನ್ನು ಅನುಷ್ಠಾನಗೊಳಿಸುವ ಸಂಬಂಧ ಆದೇಶ ಹೊರಡಿಸಿದೆ.
ರೋಗಿಯು ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂಕೋರ್ಟ್ನ ನಿರ್ದೇಶನವನ್ನು ಜಾರಿಗೆ ತರಲು ಐತಿಹಾಸಿಕ ಆದೇಶ ಹೊರಡಿಸಿದ್ದೇವೆ. ಚೇತರಿಕೆಯ ಭರವಸೆ ಇಲ್ಲದ ಮಾರಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಮುಂದೆ ಜೀವ ಉಳಿಸುವ ಚಿಕಿತ್ಸೆಯಿಂದ ಪ್ರಯೋಜನ ಆಗಲ್ಲ ಎಂಬುದನ್ನು ದೃಢೀಕರಿಸಿದ ನಂತರ ಘನತೆಯಿಂದ ಸಾಯುವ ಅವಕಾಶವನ್ನು ಈ ಕಾನೂನು ನೀಡುತ್ತದೆ. ಇದರಿಂದ ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಗೌರವಯುತವಾದ ಸಾವು ಬಯಸುವವರಿಗೂ ಅನುಕೂಲವಾಗುತ್ತದೆ ಎಂದು ದಿನೇಶ ಗುಂಡೂರಾವ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರಗತಿಪರ ರಾಜ್ಯವಾಗಿದ್ದು, ಹೆಚ್ಚು ಮತ್ತು ನ್ಯಾಯಯುತ ಸಮಾಜಕ್ಕಾಗಿ ಉದಾರ ಮತ್ತು ಸಮಾನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ ಎಂದು ಆರೋಗ್ಯ ಸಚಿವರು ಬರೆದುಕೊಂಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ