ಚಿತ್ರದುರ್ಗ: ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮತ್ತೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಳೆದ ಆರೇಳು ವರ್ಷಗಳಿಂದ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿಯ ಬಂಜಾರ ಗುರುಪೀಠದಲ್ಲಿ ವಾಸವಾಗಿದ್ದ ನಾಗಾಸಾಧು ರಾಜನಾಥ ಮಹಾರಾಜ್ (48) ಮೃತಪಟ್ಟಿದ್ದಾರೆ ಎಂದು ತಿಳುದುಬಂದಿದೆ.
ರಾಜನಾಥ ಮಹಾರಾಜ್ ಅವರು ಹದಿನೈದು ದಿನಗಳ ಹಿಂದೆ ಕುಂಭಮೇಳಕ್ಕೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಸುದ್ದಿ ತಿಳಿದುಬಂದಿದೆ ಎಂದು ಬಂಜಾರ ಗುರುಪೀಠದ ಶ್ರೀ ಸೇವಾಲಾಲ ಸ್ವಾಮೀಜಿ ಖಚಿತ ಪಡಿಸಿದ್ದಾರೆ.
“ನಾಗಸಾಧುಗಳ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಆಘಾತವಾಗಿದೆ. ಕಳೆದ ಏಳು ವರ್ಷಗಳಿಂದಲೂ ಮಠದಲ್ಲಿಯೇ ಇದ್ದರು. 15 ದಿನಗಳ ಹಿಂದೆ ಪ್ರಯಾಗರಾಜ್‌ಗೆ ಹೋಗುವಾಗ ನಮ್ಮನ್ನೂ ಆಹ್ವಾನಿಸಿದ್ದರು. ಅವರು ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನಾಗಾಸಾಧುಗಳು, ಪವಾಡ ಪುರುಷರು ಅಲ್ಲಿಗೆ ಬರುತ್ತಾರೆ, ನಮ್ಮವರು ಸಿಗುತ್ತಾರೆ ಎಂದು ಹೇಳಿ ಹೋಗಿದ್ದರು” ಎಂದು ಹೇಳಿದ್ದಾರೆ.
ಮಹಾನ್ ಜ್ಞಾನಿಯ ಪಾರ್ಥೀವ ಶರೀರ ಇಂದು ಅನಾಥವಾಗಿರುವುದು ಬೇಸರದ ಸಂಗತಿಯಾಗಿದೆ. ಕೂಡಲೇ ಸರ್ಕಾರಗಳು ಅವರ ಪಾರ್ಥೀವ ಶರೀರವನ್ನು ಮಠಕ್ಕೆ ತಲುಪಿಸಬೇಕಿದೆ. ಸರ್ಕಾರ ನಾಗಾಸಾಧುವಿನ ಪ್ರಾರ್ಥೀವ ಶರೀರ ತರುವಂತೆ ಕೆಲಸ ಮಾಡಬೇಕು” ಎಂದು ಆಗ್ರಹಿಸಿದರು.
ಅವರು ಸಿದ್ಧಿ ಸಾಧಕರು, ಅವರ ಸಂಸ್ಕಾರ ಮಾಡದಿದ್ದರೆ ನಾಡಿಗೆ ಶಾಪ ಆಗುತ್ತದೆ ಎಂದು ಎನಿಸುತ್ತಿದೆ. ಅವರ ಮೂಲ ಗೊತ್ತಿಲ್ಲ. ಆದರೆ ಅವರ ವಿಳಾಸದಲ್ಲಿ ನಮ್ಮ ಮಠದ ಮಾಹಿತಿ ಇದ್ದ ಕಾರಣ ಮಾಹಿತಿ ತಿಳಿಯಿತು. ಘನವೆತ್ತ ಸರ್ಕಾರ ಕೂಡಲೇ ಅವರ ಪಾರ್ಥೀವ ಶರೀರ ಮಠಕ್ಕೆ ತಲುಪಿಸಿ, ನಾವು ಅಂತ್ಯಸಂಸ್ಕಾರ ಮಾಡುತ್ತೇವೆ” ಎಂದು ಮನವಿ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ