(ಇಂದು ಮಹಾವಿದ್ಯಾಲಯದಲ್ಲಿ ೧೦ ಗಂಟೆಯಿಂದ ಹಳೆಯ ವಿದ್ಯಾರ್ಥಿಗಳ ಪುನರಮಿಲನ್ ಕಾರ್ಯಕ್ರಮ ನಡೆಯುತ್ತಿದ್ದು, ಈ ನಿಮಿತ್ತ ಲೇಖನ)
ಬೆಳಗಾವಿಯ ಕೆಎಲ್‌ಇ ಸಂಸ್ಥೆಯು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯಶಾಸ್ತ್ರ ಬೋಧಿಸುವ ಉತ್ಕೃಷ್ಟ ಶಿಕ್ಷಣ ಸಂಸ್ಥೆಯೊಂದನ್ನು ಆರಂಭಿಸುವ ಸದುದ್ದೇಶವನ್ನು ಹೊಂದಿ ತನ್ನ ಇಚ್ಛೆಯನ್ನು ಸಮಾಜಮುಖಿ ಸದಸ್ಯರೊಂದಿಗೆ ಹಂಚಿಕೊಂಡರು. ಹುಬ್ಬಳ್ಳಿಯ ಪೂಜ್ಯ ಶ್ರೀ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಅವರು ವಿದ್ಯಾನಗರದಲ್ಲಿ ವಿಶಾಲವಾದ ನಿವೇಶನದ ಜೊತೆಗೆ ಧನಸಹಾಯವನ್ನು ದೇಣಿಗೆಯ ರೂಪದಲ್ಲಿ ಹಸ್ತಾಂತರಿಸಿದರು.
ಕೆಎಲ್‌ಇ ಸಂಸ್ಥೆಯು ಅವಿರತ ಪ್ರಯತ್ನದಿಂದ ಬಾಂಬೆ ವಿಶ್ವವಿದ್ಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಕೆಎಲ್‌ಇ ಸಂಸ್ಥೆಯು ಹುಬ್ಬಳ್ಳಿಯಲ್ಲಿ ೧೯೪೭ ರಲ್ಲಿ ಮಹಾವಿದ್ಯಾಲಯವು ಸ್ಥಾಪಿಸಲು ಮುನ್ನುಡಿ ಬರೆದರು.
೧೧೪ ವಿದ್ಯಾರ್ಥಿಗಳಿಂದ ಆರಂಭಗೊಂಡ ಮಹಾವಿದ್ಯಾಲಯವು, ೧೯೪೯ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸಂಲಗ್ನತ್ವವನ್ನು ಪಡೆದುಕೊಂಡಿತು. ಮತ್ತು ಬಿ.ಕಾಂ ಪದವಿ ಶಿಕ್ಷಣ ಕೋರ್ಸನ್ನು ಆರಂಭಿಸಲು ಅನುಮತಿ ಪಡೆದುಕೊಂಡು ಕರ್ನಾಟಕ ವಿಶ್ವವಿದ್ಯಾಲಯ ಶಾಶ್ವತ ಸಂಯೋಜನೆಯಗೆ ಒಳಪಟ್ಟಿತು. ೨೦೧೭ ರಲ್ಲಿ ಸ್ನಾತಕೋತ್ತರ ವಾಣಿಜ್ಯ ಶಿಕ್ಷಣ(ಪಿಜಿ) ನೀಡುತ್ತಾ ಮುನ್ನಡೆಯುತ್ತಿದೆ. ಉತ್ತರ ಕರ್ನಾಟಕ ವಾಣಿಜ್ಯಶಾಸ್ತ್ರವನ್ನು ಬೋಧಿಸುವ ಮತ್ತು ವಾಣಿಜ್ಯ ವ್ಯಾಪಾರ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ವೃತ್ತಿಪರರನ್ನು ಸಿದ್ಧಗೊಳಿಸುತ್ತ ದೇಶದ ಆರ್ಥಿಕತೆಗೆ ವಿಶಿಷ್ಟ ಕೊಡುಗೆ ನೀಡುತ್ತಿದೆ.
ವಿದ್ಯಾನಗರದ ವಿಶಾಲವಾದ ೯.೨೫ ಎಕರೆ ಜಮೀನಿನಲ್ಲಿ ತಲೆಯತ್ತಿ ನಿಂತಿರುವ ಸಂಸ್ಥೆಯು ಸಕಲ ಮೂಲಭೂತ ಸೌಕರ‍್ಯಗಳು, ವಿಶಾಲವಾದ ತರಗತಿ ಕೋಣೆಗಳು, ಸ್ವತಂತ್ರವಾದ ಸುಸಜ್ಜಿತವಾದ ಗ್ರಂಥಾಲಯ ಹಾಗೂ ಗಣಕ ಯಂತ್ರ ಪ್ರಯೋಗಾಲಯ, ಎಲ್.ಸಿ.ಡಿ. ಮಲ್ಟಿಮೀಡಿಯಾ ಸಿಸ್ಟಂ, ವಿದ್ಯಾರ್ಥಿ ವಸತಿ ನಿಲಯ, ಎನ್.ಸಿ.ಸಿ. ಎನ್.ಎಸ್.ಎಸ್. ಸಿಬ್ಬಂದಿ ವಸತಿ ಗೃಹ, ವಿಶಾಲವಾದ ಕ್ರೀಡಾಂಗಣವನ್ನು ಹೊಂದಿದೆ. ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಮೂಲಕ ವಿದ್ಯಾರ್ಥಿಗಳ ನೇಮಕಾತಿಗೆ ಶ್ರಮಿಸುತ್ತಿದೆ.
ಗ್ರಂಥಾಲಯದಲ್ಲಿ ೭೨೦೦೦ಕ್ಕೂ ಹೆಚ್ಚಿನ ಗ್ರಂಥಗಳ ಸಂಗ್ರಹವಿದ್ದು, ಅಪಾರವಾದ ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳನ್ನು, ಇ-ಬುಕ್ಸ್, ಇ-ಜನರಲ್ಸ್ ಮುಂತಾದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾದ ಮಹಾವಿದ್ಯಾಲಯವು ಈವರೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಸೃಷ್ಟಿಸಿದೆ. ವಿದ್ಯಾರ್ಥಿಗಳಾದ ಅವಿನಾಶ ವೈದ್ಯ, ರಾಜೇಶ ಕಾಮತ, ಪ್ರಮೋದ ಕಾಮತ, ಬಾಪು ಪಾಟೀಲ, ಮನೋಜ ಮಲಹೋತ್ರಾ ಮುಂತಾದವರು ಕರ್ನಾಟಕ ರಾಜ್ಯ ರಣಜಿ ಕ್ರಿಕೇಟ್ ತಂಡಕ್ಕೆ ಆಯ್ಕೆ ಆಗಿದ್ದರು.
ಶೈಕ್ಷಣಿಕ ಚಟುವಟಿಕೆಗಳಲ್ಲಿ ಮಹಾವಿದ್ಯಾಲಯವು ಅನೇಕ ಸಾಧನೆಗಳನ್ನು ಮಾಡಿದೆ. ವಿಶ್ವವಿದ್ಯಾಲಯದ ಹಂತದಲ್ಲಿ ೧೧೨ ಕ್ಕೂ ರ‍್ಯಾಂಕುಗಳನ್ನು ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅನುಮೋದನೆಗೊಂಡ ವೊಕೆಶನಲ್ ಬಿ.ಕಾಂ. ಇನಕಂ ಟ್ಯಾಕ್ಸ್ ಪ್ರೊಸಿಜರ‍್ಸ್ ಮತ್ತು ಪ್ರಾಕ್ಟೀಸ್ ಕೋರ್ಸುಗಳಿವೆ. ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಉಪನ್ಯಾಸ ಮಾಲಿಕೆಗಳನ್ನು ಗುಂಪು ಚರ್ಚೆಗಳನ್ನು , ಅಣಕು ಸಂದರ್ಶನಗಳನ್ನು, ಬ್ಯಾಂಕುಗಳಿಗೆ ಬೆಟ್ಟಿ ನೀಡುವುದನ್ನು , ಆದಾಯ ಮತ್ತು ಮಾರಾಟ ತೆರಿಗೆ ಸಂಸ್ಥೆಗಳಿಗೆ ಬೆಟ್ಟಿ ನೀಡುವುದನ್ನು ಉದ್ಯಮ ಶೀಲತೆಯ ಕುರಿತಾತ ಪ್ರಾಯೋಗಿಕ ತರಬೇತಿಯನ್ನು ನೀಡುತ್ತಿದೆ. ವಾಣಿಜ್ಯ ಕ್ಷೇತ್ರದ ತಜ್ಞರೊಂದಿಗೆ ವಿದ್ಯಾರ್ಥಿಗಳ ನೇರ ಸಂವಾದ ಕಾರ್ಯಕ್ರಗಳನ್ನು ಆಯೋಜಿಸುತ್ತಿರುವ ಮೂಲಕ ವಿದ್ಯಾರ್ಥಿಗಳಲ್ಲಿ ವೃತ್ತಿ ಪರತೆಯನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರೊತ್ಸಾಹಿಸುತ್ತಿದೆ. ಇದಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳನ್ನು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಮಹಾವಿದ್ಯಾಲಯದಿಂದ ಇಲ್ಲಿಯವರೆಗೆ ೫೬ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ವ್ಯಾಪಾರಸ್ಥರಾಗಿ, ಉದ್ದಿಮೆದಾರರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ, ಬ್ಯಾಂಕುಗಳ ಸಿಬ್ಬಂದಿಗಳಾಗಿ, ಅಧಿಕಾರಿಗಳಾಗಿ, ಲೆಕ್ಕ ಪರಿಶೋಧಕರಾಗಿ, ಉಪನ್ಯಾಸಕರಾಗಿ, ಪೊಲೀಸ್ ಅಧಿಕಾರಿಗಳಾಗಿ, ಶಿಕ್ಷಣಾಧಿಕಾರಿಗಳಾಗಿ, ಪ್ರಾಚಾರ್ಯರಾಗಿ, ಚುನಾಯಿತ ಪ್ರತಿನಿಧಿಗಳಾಗಿ, ಶಾಸಕರಾಗಿ, ವಾಣಿಜ್ಯ ತೆರಿಗೆ ಮತ್ತು ಆದಾಯ ತೆರಿಗೆ ಅಧಿಕಾರಿಗಳಾಗಿ, ಸಮಾಜದ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿದ್ದ ಶಿವಾನಂದ ಕೌಜಲಗಿ, ಆಡಳಿತ ಮಂಡಳಿಯ ಸದಸ್ಯರಾಗಿದ್ದ ಎಸ್.ಸಿ. ಮೆಟ್‌ಗುಡ್, ಮಾಜಿ ಸಭಾಪತಿಗಳಾದ ಕೆ.ಬಿ. ಕೊಳಿವಾಡ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ, ಹಿರಿಯಪತ್ರಕರ್ತರಾದ ಗೋಪಾಲಕೃಷ್ಣ ಹೆಗಡೆ, ಐಪಿಎಸ್ ಅಧಿಕಾರಿಗಳಾದ ವಿಶ್ವನಾಥ ಸಜ್ಜನರ, ಶಾಸಕರಾದ ಎಂ.ಆರ್. ಪಾಟೀಲ, ಮಾಜಿಮಹಾಪೌರರಾದ ವೀರಣ್ಣ ಸವಡಿ, ಮಹಾನಗರಸಭೆಯ ಸದಸ್ಯರಾದ ರಾಜಣ್ಣ ಕೊರವಿ, ಆಡಳಿತ ನಿರ್ವಹಣೆಯ ತಜ್ಞರಾದ ಡಾ. ವಿಶ್ವನಾಥ ಕೊರವಿ, ಉದ್ದಿಮೆದಾರರಾದ ಆನಂದ ಸಂಕೇಶ್ವರ ಮುಂತಾದವರು ಪ್ರಮುಖರಾಗಿದ್ದಾರೆ. ೨೦೦ಕ್ಕೂ ಹೆಚ್ಚಿನ ಲೆಕ್ಕ ಪರಿಶೋಧಕರನ್ನು ನಾಡಿಗೆ ನೀಡಿದ ಶ್ರೇಯಸ್ಸು ಮಹಾವಿದ್ಯಾಲಯಕ್ಕೆ ಸಲ್ಲುತ್ತದೆ.
ಮಹವಿದ್ಯಾಲಯದ ಸಿಬ್ಬಂದಿಗಳಾಗಿದ್ದ ಪ್ರೊ. ಎಂ.ಎಸ್. ಹಳ್ಳೂರ, ಪ್ರೊ. ಕೆ.ಡಿ. ಬಸವಾ, ಪ್ರೊ. ವಿ.ಎನ್. ಮುಗಳಿ, ಪ್ರೊ. ಎಂ.ಬಿ. ಕಡಕೋಳ, ಪ್ರೊ. ಸಿ.ಎಮ್. ನಿಲಣ್ಣವರ, ಪ್ರೊ.ಎಸ್.ಬಿ. ಹುಲಕೋಟಿ, ಪ್ರೊ. ವಿ.ಬಿ. ಬೆಂಗೇರಿ, ಪ್ರೊ. ಡಿ.ಸಿ. ಮುದಬಸಪ್ಪಗೋಳ, ಡಾ. ಡಿ.ಬಿ. ಹೊನಗಣ್ಣವರ, ಪ್ರೊ. ಜಿ.ಬಿ. ಬಳಿಗಾರ, ಪ್ರೊ. ಎಸ್.ಎಲ್ ಪಾಟೀಲ, ವಾಣಿಜ್ಯ ವಿಷಯದ ಗ್ರಂಥಗಳು ರಾಜ್ಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.
ವೈ.ಎಸ್. ಮಹಾಜನ್, ಬಿ.ಎಂ. ರಾಮಲಿಂಗಯ್ಯ, ಡಾ.ಸಿ.ಸಿ. ಪಟ್ಟಣಶೆಟ್ಟಿ, ಎಂ. ಹಾಲಯ್ಯ, ಎಂ.ಎಸ್. ಹಳ್ಳೂರ, ಎಂ.ಸಿ. ಶೆಟ್ಟರ. ಬಿ.ಎಫ್. ಪಾಟೀಲ, ಡಾ. ಎಸ್.ಎಚ್. ಪಾಟೀಲ, ಎಚ್.ಎಸ್. ಚೌಡಾಪುರ, ಬಿ.ಬಿ. ತಿರಕರೆಡ್ಡಿ, ಬಿ.ಎಸ್. ಹಿತ್ತಲಮನಿ, ಆರ್. ನಟರಾಜ, ಡಾ. ಎ.ಡಿ. ಮುಳಗುಂಡ, ಡಾ. ಡಿ.ಬಿ. ಹೊನಗಣ್ಣವರ ಅವರುಗಳು ಮಹಾವಿದ್ಯಾಲಯದ ಪ್ರಾಚಾರ್ಯರುಗಳಾಗಿ ಕಾರ್ಯನಿರ್ವಹಿಸುದ್ದು, ಸದ್ಯ ೧೯೯೦ ರ ಹಳೆಯ ವಿದ್ಯಾರ್ಥಿ ಎಸ್.ಎಲ್. ಪಾಟೀಲ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘವು ಹಲವಾರು ವರ್ಷಗಳಿಂದ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ. ಲೆಕ್ಕ ಪರಿಶೋಧಕರಾಗಿದ್ದ ಓ.ವಿ. ಗದಗ ಅವರು ಸಂಘದ ಅಧ್ಯಕ್ಷರಾಗಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ. ಸದ್ಯದ ಅಧ್ಯಕ್ಷರಾದ ಎಂ.ಆರ್. ಪಾಟೀಲ ಮತ್ತು ಕ್ರಿಕೇಟ್ ಮಾಂತ್ರಿಕ ಖಜಾಂಚಿಗಳಾದ ಬಾಬಾ ಭೂಸದ ಅವರ ನಿರಂತರ ಕಾರ್ಯಶೈಲಿ ಅವಿಸ್ಮರಣೀಯ ಮತ್ತು ಅನುಕರಣೀಯವಾಗಿದೆ.ಬೋಧಕ ಮತ್ತು ಬೋಧಕೇತರ ಸಬ್ಬಂದಿಗಳ ನುಡಿಗಳನ್ನು ಮತ್ತು ಪ್ರಾಧ್ಯಾಪಕರ ಮತ್ತು ಸ್ನೇಹಿತರ ಒಡನಾಟವನ್ನು ಹಳೆ ವಿದ್ಯಾರ್ಥಿಗಳು ಸದಾ ಸ್ಮರಿಸುತ್ತಾರೆ. ಕಳೆದ ಎರಡು ತಿಂಗಳಿಂದ ಮಹಾವಿದ್ಯಾಲಯದ ಪದವಿಪೂರ್ವ ಮತ್ತು ಪದವಿ ಸಿಬ್ಬಂದಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಪುನರಮಿಲನ್ ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಬಿ. ಕೋರೆ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅನೀಲ ವಿ. ಪಟ್ಟೇದ ಮತ್ತು ಹಿರಿಯ ಸದಸ್ಯರಾದ ಶಂಕರಣ್ಣ ಐ. ಮುನವಳ್ಳಿ ಮತ್ತು ಸದಸ್ಯರು, ಅಜೀವ ಸದಸ್ಯರು, ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ಡಾ. ಎಂ.ಎಸ್. ಬೆಂಬಳಗಿ ಮತ್ತು ಸದಸ್ಯರ ನಿರಂತರ ಮಾರ್ಗದರ್ಶನದಿಂದ ಮಹಾವಿದ್ಯಾಲಯವು ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ ಎಂದು ಪ್ರಾಚಾರ್ಯ ಎಸ್. ಎಲ್. ಪಾಟೀಲ ಮತ್ತು ಪದವಿ ಪೂರ್ವ ಪ್ರಾಚಾರ್ಯ ಡಾ.ವಿ.ಆರ್. ವಾಘ್ಮೊಡೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಗಣ್ಯರಾದ ಎನ್.ಎ.ಪಾಲಿವಾಲ್, ಟಿ.ಕೆ. ತುಕೋಳ, ಡಿ.ಎಸ್. ಕೋಠಾರಿ, ಡಾ.ಸಿ.ಡಿ. ದೇಶಮುಖ, ಡಾ. ಬಿ.ಡಿ.ಜತ್ತಿ, ಡಾ.ಆರ್.ಆರ್. ದಿವಾಕರ, ಡಾ.ಅಪ್ಪಾಸಾಹೇಬ ಪವಾರ, ಡಾ.ವಿ.ಕೆ.ಆರ್.ವಿ.ರಾವ, ಟಿ.ಎ. ಪೈ, ಜನರಲ್ ಕಾರಿಯಪ್ಪ, ಸುಂದರಾಮ ಶೆಟ್ಟಿ, ಶ್ರೀಮತಿ ಕಮಲಾ ಹಂಪನಾ, ಬಿ.ವಿ.ಕಟ್ಟಿ, ಎಚ್.ಕೆ. ಶಿವಾನಂದ, ಪ್ರಕಾಶ ಪಡಕೋಣೆ ಜೆ.ಪಿ. ಜವಳಿ, ಮುಂತಾದವರು ಮಹಾವಿದ್ಯಾಲಯದ ಕಾರ್ಯಕ್ರಮಗಳಿಗೆ ಭಾಗವಹಿಸಿದ್ದಾರೆ.
ಮಹಾವಿದ್ಯಾಲಯದಲ್ಲಿ ೧೭೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ೭೦ಕ್ಕೂ ಹೆಚ್ಚಿನ ಸಿಬ್ಬಂದಿ , ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಪ್ರಜ್ಞೆ, ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುತ್ತಿರುವ ಮಹಾವಿದ್ಯಾಲಯ ವಾಣಿಜ್ಯ ಶಿಕ್ಷಣಕ್ಕೆ ತನ್ನದೆ ಆದ ಕೊಡುಗೆಗಳನ್ನು ನೀಡುತ್ತಾ ಮುನ್ನಡೆಯುತ್ತಿದೆ.
-ಡಾ.ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು
ನಿಮ್ಮ ಕಾಮೆಂಟ್ ಬರೆಯಿರಿ