ಮೈಸೂರು: ಮುಡಾ ನಿವೇಶನ ಹಗರಣದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೇನಾಮಿ ಆಸ್ತಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕುಟುಂಬದವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ದೂರು (Benami Property) ಸಲ್ಲಿಸಿದ್ದಾರೆ.
ಆಲನಹಳ್ಳಿ ಗ್ರಾಮದ ಸರ್ವೇ ನಂಬರ್ 113/4ರ ಒಂದು ಎಕರೆ ಜಮೀನಿಗೆ ಸಂಬಂಧಿಸಿದ ವಿಚಾರಕ್ಕೆ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಆರೋಪ ಮಾಡಿದ್ದು, ಮೈಸೂರು ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಲಾಗಿದೆ.
ಮೈಸೂರು ತಾಲೂಕಿನ ಆಲನಹಳ್ಳಿ ಗ್ರಾಮದ ಸರ್ವೆ ನಂ. 113/4ರಲ್ಲಿ 1 ಎಕರೆ ಭೂಮಿಯನ್ನು 1983ರ ಡಿ.15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬವರಿಂದ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದ್ದರು. 1996ರಲ್ಲಿ ಅಂತಿಮ ಅಧಿಸೂಚನೆ ಆಗಿರುವ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫೈ ಮಾಡಿಸಿದ್ದು, 2006 ರಲ್ಲಿ ಮಲ್ಲಿಕಾರ್ಜುನಸ್ವಾಮಿಯಿಂದ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿ ಆದೇಶ ಹೊರಡಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅದೇ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 2010 ಅಕ್ಟೋಬರ್ 20ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ದಾನ ಮಾಡಿದ್ದಾರೆ. ಪಾರ್ವತಿ ಅವರು ಕೂಡ 2010ರ ನ.11ರಂದು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಬಂದ ಭೂಮಿಯನ್ನು ಒಂದೇ ತಿಂಗಳಲ್ಲಿ ದಾನ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ತಮಗೆ ಬಂದ ಭೂಮಿಯನ್ನ 2011ರ ಮಾ. 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಅದರಲ್ಲಿ ಆರೋಪಿಸಿದ್ದಾರೆ.
ಸರ್ಕಾರ ಸ್ವಾಧೀನ ಮಾಡಿಕೊಂಡ ಜಮೀನು ಅಷ್ಟು ಬೇಗ ಹೇಗೆ ಸ್ವಾಧೀನದಿಂದ ಕೈಬಿಡಲಾಗಿದೆ..? ಸಿದ್ದರಾಮಯ್ಯ ಪ್ರಭಾವದಿಂದ ಅಧಿಕಾರಿಗಳು ಕಾನೂನು ನಿಯಮ ಮೀರಿ ಭೂಮಿ ಪರಭಾರೆ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ