ಕೊಯಮತ್ತೂರು: ತಮಿಳುನಾಡಿನ ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶದ (ಎಟಿಆರ್) ಪೊಲ್ಲಾಚಿ-ವಾಲ್ಪಾರೈ ರಸ್ತೆಯ ಟೈಗರ್ ವ್ಯಾಲಿ ಬಳಿ ಮಂಗಳವಾರ ಸಂಜೆ ಕಾಡಾನೆಯ ದಾಳಿಯಿಂದಾಗಿ 77 ವರ್ಷದ ಜರ್ಮನ್ ಪ್ರವಾಸಿಗನೊಬ್ಬ ಸಾವಿಗೀಡಾಗಿದ್ದಾರೆ.
ಮೃತರನ್ನು ಮಿಕೆಲ್ ಜುರ್ಸೆನ್ ಎಂದು ಗುರುತಿಸಲಾಗಿದೆ. ಆತ ಬಾಡಿಗೆ ದ್ವಿಚಕ್ರ ವಾಹನದಲ್ಲಿ ಸಂಜೆ 6 ಗಂಟೆ ಸುಮಾರಿಗೆ ವಾಲ್ಪಾರೈ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆಯ ಮಧ್ಯದಲ್ಲಿಯೇ ಜನರಿಗೆ ಆನೆ ಎದುರಾಗಿದೆ. ರಸ್ತೆಯಲ್ಲಿ ಕಾಡಾನೆಯನ್ನು ಕಂಡನಂತರ ಹಲವಾರು ಜನರು ದೂರದಲ್ಲಿ ನಿಂತು ಆನೆ ಅಲ್ಲಿಂದ ತೆರಳುವ ವರೆಗೂ ಕಾಯುತ್ತಿದ್ದರು. ಆಗ ಈ ಜರ್ಮನ್ ಪ್ರವಾಸಿಗ ಬೈಕ್‌ನಲ್ಲಿ ಅದರ ಪಕ್ಕದಲ್ಲಿದ್ದ ಜಾಗದಲ್ಲಿ ಹೋಗಲು ಮುಂದಾಗಿದ್ದಾನೆ.
ಇತರ ವಾಹನದವರು ಎಷ್ಟೇ ಎಚ್ಚರಿಕೆ ನೀಡಿದರೂ ಜರ್ಮನ್ ಪ್ರವಾಸಿಗ ಕೇಳಿಸಿಕೊಳ್ಳಲಿಲ್ಲ. ಆತ ಸಮೀಪಿಸುತ್ತಿದ್ದಂತೆ, ಆನೆಯು ಆತನನ್ನು ಎತ್ತಿ ರಸ್ತೆಯ ಬದಿಗೆ ಎಸೆಯಿತು.
ಸ್ವಲ್ಪ ಸಮಯದ ನಂತರ, ಪ್ರವಾಸಿ ಎದ್ದು ಮತ್ತೆ ಅಲ್ಲಿಂದ ಹೋಗಲು ಮತ್ತೆ ಆನೆ ಕಡೆಗೆ ಬಂದಿದ್ದಾನೆ. ಆನೆ ಮತ್ತೆ ಕೆಳಗೆ ಎಸೆದಿದೆ. ಆನೆಯನ್ನು ಓಡಿಸಲು ದೂರದಲ್ಲಿದ್ದ ಉಳಿದ ವಾಹನ ಸವಾರರು ಜೋರಾಗಿ ಹಾರ್ನ್ ಮಾಡಿದರು, ಬೊಬ್ಬೆ ಹೊಡೆದರು. ನಂತರ ಆನೆ ಅಲ್ಲಿಂದ ತೆರಳಿದೆ.
ಆದರೆ ಆನೆಯ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಪ್ರವಾಸಿಗನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಜುರ್ಸೆನ್ ಅವರನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸುವ ಮೊದಲು ವಾಟರ್ ಫಾಲ್ಸ್ ಎಸ್ಟೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾರೆ.
“ಆನೆಗಳು ಇರುವ ಬಗ್ಗೆ ಎಚ್ಚರಿಕೆ ನೀಡಿದಾಗಲೂ ಅದನ್ನು ನಿರ್ಲಕ್ಷಿಸಿ ರಸ್ತೆ ದಾಟಲು ಮುಂದಾದ ಜುರ್ಸೆನ್‌ನ ನಿರ್ಧಾರವು ಮಾರಣಾಂತಿಕ ಆನೆ ದಾಳಿಗೆ ಕಾರಣವಾಯಿತು” ಎಂದು ವಾಲ್ಪಾರೈ ಅರಣ್ಯ ರಕ್ಷಕ ಜಿ.ವೆಂಕಟೇಶ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ