ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗ ಸಮರ ಸಾರಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಸೋಮವಾರ ಶೋಕಾಸ್ ನೋಟಿಸ್ ನೀಡಿದೆ.
ಈ ಹಿಂದೆಯೂ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿತ್ತು. ಅವರು ಅದಕ್ಕೆ ಅವರು ಉತ್ತರ ನೀಡಿದ್ದರು. ಆದರೆ ವಿಜಯೇಂದ್ರ ವಿರುದ್ಧ ಹೇಳಿಕೆ ನೀಡುವುದು ಮುಂದುವರಿದಿತ್ತು. ಹೀಗಾಗಿ ಸೋಮವಾರ ಮತ್ತೊಮ್ಮೆ ಯತ್ನಾಳ್ ಅವರಿಗೆ ಕಾರಣ ಕೇಳಿ (ಶೋಕಾಸ್) ನೋಟಿಸ್ ನೀಡಲಾಗಿದೆ.
ಈ ನೋಟಿಸಿಗೆ 72 ಗಂಟೆಗಳಲ್ಲೇ ಉತ್ತರ ನೀಡಬೇಕು ಎಂದು ಯತ್ನಾಳ್ ಅವರಿಗೆ ಸೂಚಿಸಿದ್ದು, ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ದೆಹಲಿಯಲ್ಲಿದ್ದ ಯತ್ನಾಳ ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳಸಿದ್ದಾರೆ ಎಂದು ಹೇಳಲಾಗಿದೆ.
ಈ ಮಧ್ಯೆ ಶೋಕಾಸ್ ನೋಟಿಸ್ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಯತ್ನಾಳ, ನನಗೆ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ಮೇಲೆ ಕೆಲ ವ್ಯಕ್ತಿಗಳ ಏಕಸ್ವಾಮ್ಯತೆ, ಏಕಪಕ್ಷೀಯ ನಿರ್ಧಾರಗಳು, ಉತ್ತರ ಕರ್ನಾಟಕ ಭಾಗದ ಕಡೆಗಣನೆ, ಕುಟುಂಬ ರಾಜಕಾರಣ, ಕಾಂಗ್ರೆಸ್ ವೈಫಲ್ಯಗಳನ್ನು ಜನತೆಗೆ ವಿವರಿಸಲು ವಿಫಲವಾಗಿರುವ ಪಕ್ಷದ ಧೋರಣೆ, ಹೊಂದಾಣಿಕೆ ರಾಜಕೀಯ ಸೇರಿದಂತೆ ಸ್ವಜನಪಕ್ಷಪಾತದ ಬಗ್ಗೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರ ನೀಡುತ್ತೇನೆ ಎಂದು ಅದರಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ