ನವದೆಹಲಿ: ಸುಮಾರು 17 ವರ್ಷಗಳ ನಂತರ ಲಾಭದಾಯಕತೆಗೆ ಮರಳಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ. ಬಿಎಸ್‌ಎನ್‌ಎಲ್ (BSNL) ಡಿಸೆಂಬರ್ ತ್ರೈಮಾಸಿಕದಲ್ಲಿ 262 ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿದೆ. ಇದು ಸೇವಾ ಕೊಡುಗೆಗಳು ಮತ್ತು ಚಂದಾದಾರರ ವಿಸ್ತರಣೆಯ ಮೇಲೆ ಕೇಂದ್ರೀಕರಿಸಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗೆ “ಮಹತ್ವದ ತಿರುವು” ಎಂದು ಅವರು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ (BSNL) FTTH ಮತ್ತು ಲೀಸ್ಡ್ ಲೈನ್ ಸೇವೆ ನೀಡುವ ಮೂಲಕ 14-18 ಪ್ರತಿಶತದಷ್ಟು ಬೆಳವಣಿಗೆಯನ್ನು ಸಾಧಿಸಿದೆ ಎಂದು ಸಂವಹನ ಸಚಿವ ಸಿಂಧಿಯಾ ಹೇಳಿದ್ದಾರೆ. ಕಳೆದ ಜೂನ್‌ನಲ್ಲಿ 8.4 ಕೋಟಿ ಇದ್ದ ಬಿಎಸ್‌ಎನ್‌ಎಲ್ (BSNL) ಚಂದಾದಾರರ ಸಂಖ್ಯೆ ಡಿಸೆಂಬರ್‌ನಲ್ಲಿ ಸುಮಾರು 9 ಕೋಟಿಗೆ ಏರಿದೆ ಎಂದು ಹೇಳಿದರು.
ಬಿಎಸ್‌ಎನ್‌ಎಲ್ 17 ವರ್ಷಗಳಲ್ಲಿ ಮೊದಲ ಬಾರಿಗೆ ಆರ್ಥಿಕ ವರ್ಷ 2024-25ರ ಮೂರನೇ ತ್ರೈಮಾಸಿಕದಲ್ಲಿ ತ್ರೈಮಾಸಿಕ ಆಧಾರದ ಮೇಲೆ ಲಾಭವನ್ನು ದಾಖಲಿಸಿದೆ. ಕೊನೆಯ ಬಾರಿಗೆ ಬಿಎಸ್‌ಎನ್‌ಎಲ್ ತ್ರೈಮಾಸಿಕ ಲಾಭವನ್ನು ದಾಖಲಿಸಿದ್ದು 2007 ರಲ್ಲಿ” ಎಂದು ಅವರು ತಿಳಿಸಿದ್ದಾರೆ.
ಮೊಬಿಲಿಟಿ ಸೇವೆಗಳ ಆದಾಯವು 15% ರಷ್ಟು ಬೆಳೆದರೆ, ಫೈಬರ್-ಟು-ದಿ-ಹೋಮ್ (ಎಫ್‌ಟಿಟಿಎಚ್) ಆದಾಯವು 18% ರಷ್ಟು ಹೆಚ್ಚಾಗಿದೆ. ಅಂತೆಯೇ ಲೀಸ್ಡ್ ಲೈನ್ ಸೇವೆಗಳ ಆದಾಯವು ಹಿಂದಿನ ವರ್ಷದ ತ್ರೈಮಾಸಿಕಕ್ಕಿಂತ 14% ಹೆಚ್ಚಾಗಿದೆ.
ಗ್ರಾಹಕರಿಗೆ ಸೌಲಭ್ಯ ಹೆಚ್ಚಿಸುವ ದೃಷ್ಟಿಯಿಂದ, ಬಿಎಸ್‌ಎನ್‌ಎಲ್ (BSNL) ರಾಷ್ಟ್ರೀಯ ವೈಫೈ ರೋಮಿಂಗ್, BiTV ಮೂಲಕ ಎಲ್ಲಾ ಮೊಬೈಲ್ ಗ್ರಾಹಕರಿಗೆ ಉಚಿತ ಮನರಂಜನೆ ಮತ್ತು ಎಲ್ಲಾ FTTH ಗ್ರಾಹಕರಿಗೆ IFTV ಸಂಪರ್ಕದಂತಹ ಕೊಡುಗೆಗಳನ್ನು ಪರಿಚಯಿಸಿದೆ. ಯೋಜಿತ 100,000 ಟವರ್‌ಗಳ ನಿರ್ಮಾಣದ ಗುರಿಯಲ್ಲಿ ಸುಮಾರು 75,000 ಟವರ್‌ಗಳನ್ನು ನಿರ್ಮಿಸಲಾಗಿದೆ. ಸುಮಾರು 65,000 ಟವರ್‌ಗಳು ಕಾರ್ಯಾರಂಭ ಮಾಡಿವೆ ಮತ್ತು ಈ ವರ್ಷದ ಜೂನ್ ವೇಳೆಗೆ ಎಲ್ಲಾ 1,00,000 ಟವರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಸಚಿವರು ಹೇಳಿದ್ದಾರೆ.
ಅಲ್ಲದೆ, ಬಿಎಸ್‌ಎನ್‌ಎಲ್ ತನ್ನ ಹಣಕಾಸಿನ ಖರ್ಚು ಮತ್ತು ಒಟ್ಟಾರೆ ವೆಚ್ಚವನ್ನು ಯಶಸ್ವಿಯಾಗಿ ಕಡಿಮೆ ಮಾಡಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ ವೆಚ್ಚದಲ್ಲಿ 1,800 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ