ಬೆಂಗಳೂರು : ಬೆಂಗಳೂರಿನ ವಿಶೇಷ ಕೋರ್ಟ್ ನ ವಶದಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಬೆಲೆಬಾಳುವ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆ.
ಬೆಂಗಳೂರು ನ್ಯಾಯಾಲಯದ ಆದೇಶದ ಒಂದು ದಿನದ ನಂತರ, ವಶಪಡಿಸಿಕೊಂಡ ಆಸ್ತಿಯನ್ನು ಶನಿವಾರ ಅಧಿಕೃತವಾಗಿ ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಲಾಯಿತು.
ಕರ್ನಾಟಕ ಅಧಿಕಾರಿಗಳು ತಮಿಳುನಾಡಿಗೆ ಹಸ್ತಾಂತರಿಸಿದ ಐಷಾರಾಮಿ ವಸ್ತುಗಳಲ್ಲಿ ಚಿನ್ನದಿಂದ ಮಾಡಿದ ಖಡ್ಗ ಮತ್ತು ಚಿನ್ನದ ಕಿರೀಟ ಸೇರಿವೆ. ಚಿನ್ನದ ಡಾಬು, ಚಿನ್ನದ ಕಿರೀಟ, ವಾಚುಗಳು ಸೇರಿದಂತೆ ಹಲವು ವಸ್ತುಗಳನ್ನು ತಮಿಳುನಾಡು ವಶಕ್ಕೆ ನೀಡಲಾಗಿದೆ.
ಈವರೆಗೆ ಜಯಲಲಿತಾ ಅವರಿಗೆ ಸೇರಿದ 27 ಕೆಜಿ 558 ಗ್ರಾಂ ಚಿನ್ನಾಭರಣ, 1,116 ಕೆಜಿ ಬೆಳ್ಳಿ ಮತ್ತು 1,526 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳು ಕರ್ನಾಟಕದ ಅಧಿಕಾರಿಗಳ ವಶದಲ್ಲಿದ್ದವು. ಕರ್ನಾಟಕ ವಿಧಾನಸೌಧದ ಖಜಾನೆಯಲ್ಲಿ ಇವುಗಳನ್ನು ಠೇವಣಿ ಇರಿಸಲಾಗಿತ್ತು, ನ್ಯಾಯಾಲಯ ಮತ್ತು ಸರ್ಕಾರಿ ಅಧಿಕಾರಿಗಳು ಹಾಜರಿದ್ದು, ಇವುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ಸಾವಿರಾರು ಕೋಟಿ ಮೌಲ್ಯದ ಸ್ಥಿರಾಸ್ತಿಗಳ ಹರಾಜು ಮಾಡಬೇಕು ಅಥವಾ ಸಾರ್ವಜನಿಕರಿಗಾಗಿ ಬಳಸಬೇಕೆಂದು ಕೋರ್ಟ್ ಆದೇಶಿಸಿದ್ದು, ಶನಿವಾರ (ಫೆಬ್ರವರಿ 15) ತಮಿಳುನಾಡಿನಿಂದ ಅಗಮಿಸಿದ್ದ ಗೃಹ ಇಲಾಖೆ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಜಯಲಲಿತಾರ ಒಡವೆ ವಸ್ತುಗಳನ್ನು ತಮಿಳುನಾಡಿಗೆ ಸಾಗಿಸಿದರು.
ಕಾನೂನು ಪ್ರಕ್ರಿಯೆಗಳ ಭಾಗವಾಗಿ ವಶಪಡಿಸಿಕೊಂಡ ವಸ್ತುಗಳು ಫೋಟೋಗಳನ್ನು ತೆಗೆಯಲಾಗಿದ್ದು, ಇದು ಜಯಲಲಿತಾ ಸಂಗ್ರಹಿಸಿದ್ದ ಸಂಪತ್ತಿನ ಒಂದು ನೋಟವನ್ನು ನೀಡುತ್ತದೆ. ವಶಪಡಿಸಿಕೊಂಡ ಆಸ್ತಿಗಳಲ್ಲಿ ಸಂಕೀರ್ಣವಾದ ಆಭರಣಗಳಿವೆ. ಚಿತ್ರಗಳು ಪ್ರದರ್ಶಿಸಲಾದ ಆಭರಣಗಳ ಸಾಲುಗಳನ್ನು ತೋರಿಸುತ್ತವೆ.
2016 ರಲ್ಲಿ ನಿಧನರಾದ ತಮಿಳುನಾಡು ಮಾಜಿ ಮುಖ್ಯಮಂತ್ರಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಇದು ಸುಮಾರು 21 ವರ್ಷಗಳಿಂದ ಕರ್ನಾಟಕ ರಾಜ್ಯದ ಖಜಾನೆಯಲ್ಲಿ ಬಿದ್ದಿತ್ತು.
ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಗೊಂಡ ವಸ್ತುಗಳಲ್ಲಿ 27 ಕೆಜಿ ತೂಕವುಳ್ಳ 1606 ಬಗೆಯ ಚಿನ್ನ, ವಜ್ರಾಭರಣಗಳು, 2,20,384 ರೂಪಾಯಿಯ ಹಳೆಯ ನೋಟುಗಳು, ಚಿನ್ನದಿಂದ ಮಾಡಿದ 481 ವಸ್ತುಗಳು, ಚಿನ್ನದ ಆಭರಣ ಸೇರಿದಂತೆ 1,520 ಎಕರೆಗೂ ಹೆಚ್ಚು ಜಮೀನಿನ ದಾಖಲೆಗಳು, 10.18 ಕೋಟಿ ಮೊತ್ತದ ಬ್ಯಾಂಕ್ ನ ನಿಶ್ಚಿತ ಠೇವಣಿಗಳು ಸೇರಿವೆ. ಇವುಗಳನ್ನು ಅಧಿಕಾರಿಗಳು ಬ್ಯಾಗ್‌ಗಳು, ಸೂಟ್‌ಕೇಸ್‌ಗಳು ಮತ್ತು ಟ್ರಂಕ್‌ಗಳಿಗೆ ತುಂಬಿ ಸಾಗಿಸಿದರು. ತಮಿಳುನಾಡು ಪೊಲೀಸರ ವಶದಲ್ಲಿರುವ ಜಯಲಲಿತಾರು ಬಳಸುತ್ತಿದ್ದ ಐಷಾರಾಮಿ ಬಸ್ ಹರಾಜಿಗೆ ಸೂಚನೆ ನೀಡಲಾಗಿದೆ. ತಮಿಳುನಾಡಿನ ಚೆನ್ನೈ, ತಂಜಾವೂರು, ಚೆಂಗಲಪಟ್ಟು, ಕಾಂಚಿಪುರಂ, ತಿರುವಳ್ಳೂರ್, ತಿರುವರೂರ್, ತೂತುಕುಡಿಯಲ್ಲಿನ 1526 ಎಕರೆ ಜಮೀನು ಹರಾಜಿನ ಹಣವನ್ನು ಸಾರ್ವಜನಿಕ ಬಳಕೆ ಮಾಡುವಂತೆಕೋರ್ಟ್ ಸಲಹೆ ನೀಡಿದೆ. ಚಿನ್ನಾಭರಣಗಳನ್ನು ಆರ್‌ಬಿಐಗೆ ಮಾರಾಟ ಮಾಡಿ ಹಣ ಜನರಿಗಾಗಿ ಬಳಸಲು ಸೂಚನೆ ನೀಡಲಾಗಿದೆ.
ತಮಿಳುನಾಡು ಸರ್ಕಾರವು ತನಗೆ ದೊರೆತಿರುವ ನ್ಯಾಯಾಂಗ ಅಧಿಕಾರವನ್ನು ಬಳಸಿ ವಜ್ರಾಭರಣ ಮತ್ತು ಆಸ್ತಿ ಮಾರಾಟದಿಂದ ಬರುವ ಹಣವನ್ನು ರಾಜ್ಯದಾದ್ಯಂತ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳ ಪ್ರಾಥಮಿಕ ಶಿಕ್ಷಣ ಮತ್ತು ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಬಳಕೆ ಮಾಡಬೇಕು. ಏಕೆಂದರೆ ಇದು ಅವರಿಗೆ ಅಗತ್ಯವಾಗಿದೆ. ಹೀಗೆ ಮಾಡಿದರೆ ಸಂವಿಧಾನ ರೂಪಿಸಿದವರ ಆಶಯವನ್ನು ಈಡೇರಿಸಿದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಸುಮಾರು 18 ವರ್ಷಗಳ ಕಾಲ ನಡೆದ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಚೆನ್ನೈನಿಂದ ಬೆಂಗಳೂರಿಗೆ ವರ್ಗಾಯಿಸಲಾಗಿತ್ತು. ಆಕೆ ಮತ್ತು ಆಕೆಯ ನಿಕಟವರ್ತಿ ವಿಕೆ ಶಶಿಕಲಾ ಮತ್ತು ಶ್ರೀಮತಿ ಶಶಿಕಲಾ ಅವರ ಸಂಬಂಧಿಕರಾದ ವಿಎನ್ ಸುಧಾಕರನ್ ಮತ್ತು ಜೆ ಇಳವರಸಿ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು 2014 ರಲ್ಲಿ ದೋಷಿಗಳೆಂದು ಘೋಷಿಸಿತು. ಅವರನ್ನು ಕರ್ನಾಟಕ ಹೈಕೋರ್ಟ್ 2015 ರಲ್ಲಿ ಖುಲಾಸೆಗೊಳಿಸಿತು ಆದರೆ 2017 ರಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸಿತು.
ಜನವರಿ 29 ರಂದು, ವಿಶೇಷ ಸಿಬಿಐ ನ್ಯಾಯಾಲಯವು ಜಯಲಲಿತಾ ಅವರಿಗೆ ಸೇರಿದ ಎಲ್ಲಾ ಜಪ್ತಿ ಆಸ್ತಿಯನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಲು ಆದೇಶಿಸಿತ್ತು ಜಯಲಲಿತಾ ಅವರ ಮರಣದ ನಂತರ ವಿಚಾರಣೆಯನ್ನು ಕೈಬಿಟ್ಟರೆ ಅವರು ಅಪರಾಧದಿಂದ ಮುಕ್ತರಾಗಿದ್ದಾರೆ ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ