(ಇಂದಿನಿಂದ (೧೯.೦೨.೨೦೨೫) ಶ್ರೀ ಸಿದ್ಧಾರೂಢ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ತನ್ನಿಮಿತ್ತ ಲೇಖನ)
ದೇಶದಲ್ಲಿರುವ ಅನೇಕ ಮಹಾತ್ಮರು, ಸಂತರು, ದಾರ್ಶನಿಕರು, ಚಿಂತಕರು ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. ಅವರಲ್ಲಿ ಹುಬ್ಬಳ್ಳಿಯ ಪೂಜ್ಯ ಶ್ರೀ ಸಿದ್ಧಾರೂಢರು ಪ್ರಮುಖರು. ಪರಶಿವನ ಅವತಾರ ಎಂದೇ ಪರಿಗಣಿತವಾಗಿರುವ ಪೂಜ್ಯರು ಅದ್ವೆೈತ ಸಾಮ್ರಾಟರಾಗಿ, ವೇದಾಂತ ಸಾರ್ವಭೌಮರಾಗಿ, ಎಲ್ಲರ ಅಜ್ಜನಾಗಿ ದಾರಿ ತೋರಿಸುತ್ತಿದ್ದಾರೆ. ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು ಹುಬ್ಬಳ್ಳಿಯನ್ನು ಪುಣ್ಯಭೂಮಿಯನ್ನಾಗಿ ಪರಿವರ್ತಿಸಿದರು. ಜಾತಿ, ಮತ, ಪಂಥವೆನ್ನದೆ ಎಲ್ಲರ ಕಾಮಧೇನು, ಕಲ್ಪವೃಕ್ಷದಂತಿರುವ ಸಿದ್ಧಾರೂಢ ಮಠ ಜ್ಯಾತ್ಯತೀತ ಮಠವೆಂದು ದೇಶದಲ್ಲಿ ಹೆಸರುವಾಸಿಯಾಗಿದೆ. ನಂಬಿದ ಭಕ್ತರನ್ನು ಕೈಹಿಡಿದು, ಅವರ ಸಂದೇಹ, ಮನದ ದುಗುಡಗಳನ್ನು ಸಂವಾದ, ಭಜನೆ, ಭಕ್ತಿ ಮತ್ತು ಸೇವಾ ಕಾರ‍್ಯಗಳಿಂದ ಪರಿಹರಿಸುತ್ತಿದ್ದಾರೆ. ಮೋಕ್ಷ ಮಂತ್ರ “ಓಂ ನಮಃ ಶಿವಾಯ” ಪಂಚಾಕ್ಷರಿ ಮಂತ್ರವನ್ನು ಎಲ್ಲರಿಗೂ ಬಹಿರಂಗವಾಗಿ ಬೋಧಿಸಿದ ಪುಣ್ಯ ಪುರುಷರು.
೯೪ ವರ್ಷ ಸಾಮಾನ್ಯರಂತೆ ಬದುಕಿದ (ಜನನ ೨೬.೦೩.೧೮೩೬; ಶಿವಸಾಯುಜ್ಯ ೨೧.೦೮.೧೯೨೯) ಪೂಜ್ಯ ಸಿದ್ಧಾರೂಢರು, ಹರನ ಸ್ವರೂಪದ ಮೂಲಕ ಎಲ್ಲರಿಗೂ ಅಭಯ ಆಶೀರ್ವಾದ ಮಾಡುತ್ತಿದ್ದಾರೆ. ಬೀದರ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದ ಶರಣ ದಂಪತಿ ಗುರುಶಾಂತಪ್ಪ ಮತ್ತು ದೇವಮಲ್ಲಮ್ಮ ಅವರ ೩ನೇ ಸುಪುತ್ರರಾದ ‘ಸಿದ್ಧರು’ ಚಿಕ್ಕವಯಸ್ಸಿನಲ್ಲಿಯೇ ಗುರು ಶೋಧನೆ ಮಾಡುತ್ತಾ, ಸುರಪುರ ಅಮರಕೊಂಡ ಮಲ್ಲಿಕಾರ್ಜುನ ಸ್ಥಟಕ ದೇವಾಲಯದ ಕಲ್ಪಮಠದ ಪೂಜ್ಯರ ಗಜದಂಡ ಸ್ವಾಮಿಗಳ ಶಿಷ್ಯರಾಗಿ ಜ್ಞಾನ ಸಂಪಾದಿಸಿಕೊಂಡರು. ಗಜದಂಡ ಸ್ವಾಮಿಗಳು ಸಿದ್ಧರ ಪ್ರತಿಭೆ, ಜ್ಞಾನ ಮತ್ತು ಪರಿಶ್ರಮವನ್ನು ಗೌರವಿಸಿ, “ಸಿದ್ಧಾರೂಢ ಭಾರತಿ” ಎಂದು ಪುನರ್ನಾಮಕರಣ ಮಾಡಿದರು. ದೇಶದ ಹಲವಾರು ಪುಣ್ಯಕ್ಷೇತ್ರಗಳ ದರ್ಶನ, ಜ್ಞಾನಗಳೊಡನೆ ವಿಚಾರ ವಿನಿಮಯ, ಮಾಡುತ್ತಾ, ೧೮೭೭ ರಲ್ಲಿ ತಮ್ಮ ೪೧ನೇ ವಯಸ್ಸಿನಲ್ಲಿ ಹುಬ್ಬಳಿಗೆ ಆಗಮಿಸಿದರು. ಸತತ ಧ್ಯಾನ ಮಾಡುತ್ತಾ, ಹುಬ್ಬಳ್ಳಿಯ ಜನತೆಗೆ ಪ್ರವಚನಗಳನ್ನು ನಿಜಗುಣ ಸಾಹಿತ್ಯವನ್ನು ತಿಳಿಸುತ್ತಾ ಬಂದರು. ಕೃಷ್ಣೇಂದ್ರ ಸ್ವಾಮಿಗಳು ತಿಳಿಸಿದ ಹುಬ್ಬಳ್ಳಿಯ ಪುಣ್ಯಾತ್ಮ ಇವರೇ ಎಂದು ತಿಳಿದು, ಹಳೇ ಹುಬ್ಬಳ್ಳಿಯ ಹನ್ನೆರಡು ಮಠದ ಸ್ವಾಮಿಗಳು ಸಿದ್ಧಾರೂಢರಿಗೆ ಆದರಾತಿಥ್ಯ ಮಾಡಿದರು. ಈಗಿನ ಪ್ರಶಾಂತವಾದ, ವಿಶಾಲವಾದ, ೧೯ ಎಕರೆ ಮಠದಲ್ಲಿ ಹಿಂದೆಯೇ ಸಿದ್ಧಾಶ್ರಮವನ್ನು ಭಕ್ತರು ನಿರ್ಮಿಸಿದ್ದರು. ಸಿದ್ಧಾರೂಢರಿಂದ ಶಾಸ್ತ್ರ ಪ್ರವಚನಗಳನ್ನು ನಿತ್ಯವೂ ಕೇಳುತ್ತಿದ್ದರು. ಹಲವಾರು ಪವಾಡಗಳನ್ನು ಮಾಡಿದ ಪೂಜ್ಯರು, ಆ ದಿನಮಾನಗಳಲ್ಲಿಯೇ ಭಕ್ತರಿಗೆ ಅನ್ನದಾಸೋಹವನವನ್ನು ಆರಂಭಿಸಿದರು. ತೊಂದರೆ ಕೊಟ್ಟವರಿಗೂ ಒಳಿತು ಮಾಡಿ ಆಶೀರ್ವಾದ ಮಾಡುತ್ತಿದ್ದರು.
ಗರಗದ ಮಾಡಿವಾಳಪ್ಪನವರು, ನವಲಗುಂದ ನಾಗಲಿಂಗ ಸ್ವಾಮಿಗಳು, ಉಣಕಲ್ಲ ಸಿದ್ದಪ್ಪಜ್ಜ, ಶಿಶುನಾಳ ಶರೀಫರು, ಕಬೀರದಾಸರು, ಮಹಾತ್ಮಾ ಗಾಂಧೀಜಿ, ಲೋಕಮಾನ್ಯ ಟಿಳಕ ಮುಂತಾದವರು ಮಠಕ್ಕೆ ಭೇಟಿ ನೀಡಿ, ಪೂಜ್ಯರಾದ ಸಿದ್ಧಾರೂಢ ಸ್ವಾಮಿಗಳೊಂದಿಗೆ ವಿಚಾರ ವಿನಿಮಯ ಮಾಡಿದ್ದಾರೆ. ಉಜ್ಜಣ್ಣವರ ಶ್ರೀ ಸಿದ್ಧಪ್ಪ ಹಾಗೂ ಪಾರ್ವತಮ್ಮ ದಂಪತಿಗಳ ಪುತ್ರರಾದ ಶ್ರೀ ಗುರುನಾಥರೂಢ ಸ್ವಾಮಿಗಳು (ಜನನ : ೦೯-೦೬-೧೯೦೯ ; ಶಿವಸಾಯುಜ್ಯ ೧೩-೦೫-೧೯೬೨) ಸಿದ್ಧಾರೂಢ ಮಠದ ಉತ್ತರಾಧಿಕಾರಿಯಾಗಿ ಮೌನದಿಂದಲೇ ಭಕ್ತರಿಗೆ ವರದಾನ ನೀಡುತ್ತಿದ್ದಾರೆ. ೫೪ ವರ್ಷ ಬಾಳಿದ ಪೂಜ್ಯರು ಇಂದಿಗೂ ತಮ್ಮ ದಿವ್ಯದೃಷ್ಟಿಯಿಂದ ಭಕ್ತರನ್ನು ಉದ್ದರಿಸುತ್ತಿದ್ದಾರೆ. ಕರ್ತೃ ಗದ್ದುಗೆಯನ್ನು (ಸಮಾಧಿಗಳು) ಮುಟ್ಟಿ, ದರ್ಶನ ಪಡೆಯುತ್ತಿರುವ ಭಕ್ತರ ಸಂಖ್ಯೆ ಬೆಳೆಯುತ್ತಲೇ ಇದೆ. ಶಿವರಾತ್ರಿ, ಅಮವಾಸ್ಯೆ, ಯುಗಾದಿ ಮುಂತಾದ ದಿನಗಳಲ್ಲಿ ದೂರದ ಊರುಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಭಕ್ತರ ಕಲ್ಯಾಣವನ್ನೇ ಬಯಸಿದ ಸಿದ್ಧಾರೂಢಮಠದಲ್ಲಿ ತ್ರಿಕಾಲ ಅನ್ನದಾನ, ಜ್ಞಾನ ದಾನ, ಆರೋಗ್ಯ ದಾನ ನಿರಂತರವಾಗಿ ನಡೆಯುತ್ತಿವೆ.
೨೩.೦೮.೧೯೨೯ ರಿಂದ ದಿನದ ೨೪ ಗಂಟೆಯೂ ಓಂ ನಮಃ ಶಿವಾಯ ಮಂತ್ರದ ಪಠಣ ತಂಬೂರಿಯೊಂದಿಗೆ ಮಠದಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದನ್ನು ಆರಂಭಿಸಿದವರು ಸಿದ್ಧಾರೂಢ ಸ್ವಾಮಿಗಳ ಶಿಷ್ಯರಾದ ಗೋವಿಂದ ಸ್ವಾಮಿಗಳು. ಮಠದಲ್ಲಿ ಇರುವ ಆರೂಢ ಜ್ಯೋತಿ ನಂದಾದೀಪ ಭಕ್ತರಿಗೆ ನಿರಂತರವಾದ ಬೆಳಕನ್ನು ನೀಡುತ್ತದೆ. ೧೯೫೦ ರಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಧಾರವಾಡದ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಟ್ರಸ್ಟ್ ವತಿಯಿಂದ ಜಾತ್ರಾ ಮಹೋತ್ಸವ, ತೆಪ್ಪದ ತೇರು, ಶ್ರೀಮನ್ನ ನಿರಂಜನ ಶಿವಯೋಗಿಗಳ ಜಯಂತಿ, ಶಿವರಾತ್ರಿ ಆಚರಣೆ ಯೋಗ ಮತ್ತು ಅಧ್ಯಾತ್ಮಿಕ ಶಿಬಿರಗಳು ನಿರಂತರವಾಗಿ ನಡೆಯುತ್ತಿವೆ.
ಶ್ರೀ ಸಿದ್ಧಾರೂಢ ಕಥಾಮೃತ, ಶ್ರೀ ಮನ್ನಿಜಗುಣ ಶಿವಯೋಗಿ ವಿರಚಿತ ಕೈವಲ್ಯ ಪದ್ಧತಿಯ ಜ್ಞಾನ ಪ್ರತಿಪಾದನ, ಸ್ಥಲ, ಸಿದ್ಧಲಕ್ಷಣ ಸಂಗ್ರಹ, ಸಿದ್ಧಾರೂಢ ಭಾರತಿ, ಶ್ರೀ ಸಿದ್ಧಾರೂಢ ಚರಿತಾಮೃತ, ಕೈವಲ್ಯ ಕಲ್ಪವಲ್ಲರಿ, ಸರ್ವಾತ್ಮ ಸದ್ಗುರು ಶ್ರೀ ಸಿದ್ಧಾರೂಢ ಭಾರತಿ, ಶ್ರೀ ಸಿದ್ಧಾರೂಢರ ಜೀವನ ಚರಿತ್ರೆ ಮುಂತಾದ ಗ್ರಂಥಗಳು ಟ್ರಸ್ಟ್ ವತಿಯಿಂದ ಪ್ರಕಟವಾಗಿವೆ. ಈ ಗ್ರಂಥಗಳು ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಯಲ್ಲಿವೆ. ‘ಸಿದ್ಧಾರೂಢ ತತ್ತ್ವಾಮೃತ’ ಮಾಸ ಪತ್ರಿಕೆ ಕಳೆದ ಐದು ವರ್ಷಗಳಿಂದ ಪ್ರತಿ ತಿಂಗಳು ಪ್ರಕಟವಾಗುತ್ತಿದೆ. ಡಾ. ಮಲ್ಲಿಕಾರ್ಜುನ ಸಿಂದಗಿ ಮುಂತಾದ ಲೇಖಕರು ಮಠದ ಕುರಿತು ಗ್ರಂಥಗಳನ್ನು, ನಾಮಾವಳಿಗಳನ್ನು, ಮಂಗಳಾರತಿ ಪದ್ಯಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.
ಕುಟುಂಬ ಸಹಿತ ಮತ್ತು ಸ್ನೇಹಿತರೊಂದಿಗೆ ಮಠಕ್ಕೆ ಬರುವ ಭಕ್ತರು ಉಭಯ ಪೂಜ್ಯರ ಗದ್ದುಗೆ, ಕೈಲಾಸ ಮಂಟಪ, ಶಯನ ಮಂದಿರ, ಪ್ರಸಾದ ಮಂದಿರದಲ್ಲಿರುವ ಪೂಜ್ಯ ಸಿದ್ಧಾರೂಡರು ಕುಳಿತು ಆಶೀರ್ವಾದ ಮಾಡುತ್ತಿದ್ದ ಖುರ್ಚಿ ದರ್ಶನ ಪಡೆದು ಧನ್ಯತಾಭಾವ ಪಡೆಯುತ್ತಿದ್ದಾರೆ. ಮಠದಲ್ಲಿ ಮುಂಜಾನೆ ೬.೦೦ ಗಂಟೆಗೆ ಸಾಯಂಕಾಲ ೬.೦೦ ಗಂಟೆಗೆ ಮಹಾಮಂಗಳಾರುತಿ ನಡೆಯುತ್ತದೆ. ಸಮಯವನ್ನು ಎಲ್ಲರಿಗೂ ಗಂಟೆ ಹೊಡೆಯುವ ಮೂಲಕ ತಿಳಿಸಲಾಗುತ್ತಿದೆ. ಮುತ್ತೆೈದೆಯರು ಪ್ರತಿದಿನ ಆರತಿಗಳೊಂದಿಗೆ ಉಭಯ ಗದ್ದುಗೆಗಳ ದರ್ಶನ ಪಡೆಯುತ್ತಿದ್ದಾರೆ. ಸ್ವಯಂ ಸೇವಕರು ಮಠದ ಆವರಣವನ್ನು ಸ್ವಚ್ಛವಾಗಿರಿಸುವದರೊಂದಿಗೆ ಭಕ್ತರಿಗೆ ಅನ್ನಪ್ರಸಾದ ನೀಡಲು ಸಹಕರಿಸುತ್ತಿದ್ದಾರೆ.
ಸಿದ್ಧಾರೂಢರ ಆಶೀರ್ವಾದ ಪಡೆದ ಲಕ್ಷಾಂತರ ಭಕ್ತರು ಬಾಳಿನಲ್ಲಿ ಬೆಳಕನ್ನು ಕಂಡಿದ್ದಾರೆ. ಭಕ್ತರ ಯಾವುದೇ ಸಮಸ್ಯೆಗೆ ಸಿದ್ಧಾರೂಢರಿಂದ ಅರೆನಿಮಿಷದಲ್ಲಿ ತಟ್ಟನೇ ಉತ್ತರ ಸಿಗುತ್ತಿತ್ತು. ಅಸದೃಶ ಶಿವಶಕ್ತಿಗಳ ಸಂಗಮವೆನಿಸಿದ ಸದ್ಗುರು ಶ್ರೀ ಸಿದ್ಧಾರೂಢರು ಮಾತನಾಡುವ ದೇವರು ಎನಿಸಿದರು. ಶ್ರೀ ಸಿದ್ಧಾರೂಢರು ಮಾತನಾಡುವ ದೇವರೆನಿಸಿದರೆ, ಅವರ ಆತ್ಮಾನಂದದ ಸ್ವರ್ಣ ಸಿಂಹಾಸನಕ್ಕೆ ನಂತರ ಅಧಿಕೃತ ಉತ್ತರಾಧಿಕಾರಿಗಳಾದ ಶ್ರೀ ಗುರುನಾಥಾರೂಢರು ಮೌನ ಬ್ರಹ್ಮರೆನಿಸಿದರು. ಈ ಇಬ್ಬರೂ ಸ್ವಾಮಿಗಳು ಆತ್ಮಜ್ಞಾನದ ಎರಡು ಮುಖಗಳು.
ಭಕ್ತರ ಅನುಕೂಲತೆಗಾಗಿ ಖೋಡೆ ಚೌಟ್ರಿ, ದಾಸಪ್ಪ ಚೌಟ್ರಿ, ಭಕ್ತ ನಿಲಯ, ಯಾತ್ರಿ ನಿವಾಸ, ನಿರಂಜನ ಹಾಲ್‌ನಲ್ಲಿ ೧೦೦ ರೂಂಗಳು ಇದ್ದು, ಸದ್ಯದಲ್ಲಿಯೇ ಇನ್ನು ಅನೇಕ ರೂಮಗಳು ಸೇವೆಗೆ ಲಭ್ಯವಾಗಲಿವೆ. ಪಾದರಕ್ಷೆಗಳನ್ನು ಇಡಲು, ಕಾಯಿಗಳನ್ನು ಒಡೆಯಲು, ಶೌಚಾಲಯ, ಸ್ನಾಗೃಹಗಳನ್ನು ಭಕ್ತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಆರೂಢ ಶ್ರಾವಣ, ಭಗವಂತ ಚಿಂತನ ಸಾಧನಾ ೪ ಶಿಬಿರಗಳೊಂದಿಗೆ ಕಳೆದ ೫ ವರ್ಷಗಳಿಂದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗಳು ಏರ್ಪಡಿಸುತ್ತಿದೆ. ೨೨೦ ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಿ ದಾಖಲೆಯನ್ನು ನಿರ್ಮಿಸಿವೆ. ೮೧೯೬ ಕ್ಕೂ ಹೆಚ್ಚಿನ ಪೋಷಕರು, ಆಶ್ರಯದಾತರು, ಆಜೀವ ಸದಸ್ಯರು, ಮಠದ ಕಾರ‍್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಆಧ್ಯಾತ್ಮಿಕ, ಸಾಂಸ್ಕೃತಿಕ ಕಂಪನ್ನು ಪಸರಿಸುತ್ತಿದ್ದಾರೆ. ರೂ. ೫೦೦೫/- ನಿರಂತರ ದಾಸೋಹಕ್ಕೆ ರೂ. ೬೯೪೦ ಮತ್ತು ರೂ. ೨೦೦೧ ನಿರಂತರ ಅಭಿಷೇಕ ಯೋಜನೆಗೆ ೧೨೨೪೦ ಭಕ್ತರು ದೇಣಿಗೆ ಸಲ್ಲಿಸಿ, ಪೂಜೆಗಳನ್ನು ನೇರವೇರಿಸುತ್ತಿದ್ದಾರೆ.
ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಜಿ. ರಮಾ ಅವರ ಮಾರ್ಗದರ್ಶನದಲ್ಲಿ ಟ್ರಸ್ಟ್ ಕಮೀಟಿಯ ಚೇರಮನ್ನರಾದ ಬಸರಾಜ ಸಿ. ಕಲ್ಯಾಣಶೆಟ್ಟರ, ವೈಸ್ ಚೇರಮನ್ ಮಂಜುನಾಥ ಶಂಕರಣ್ಣ ಮುನವಳ್ಳಿ, ಗೌರವ ಕಾರ್ಯದರ್ಶಿಗಳಾದ ಸರ್ವಮಂಗಳಾ ಎಸ್. ಪಾಠಕ ಮತ್ತು ಧರ್ಮದರ್ಶಿಗಳು ಮಠದಲ್ಲಿ ಅನೇಕ ಅಭಿವೃದ್ಧಿ ಕಾರ‍್ಯಗಳನ್ನು ಮಾಡುತ್ತಿದ್ದು, ಮಠದ ಮ್ಯಾನೇಜರ್ ಈರಣ್ಣ ತುಪ್ಪದ ೭೦ಕ್ಕೂ ಹೆಚ್ಚಿನ ಸಿಬ್ಬಂದಿ ಮಠಕ್ಕೆ ಬರುತ್ತಿರುವ ಭಕ್ತರಿಗೆ ಸಹಾಯ, ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಮಠದ ಅನುಗ್ರಹ ಪಡೆದವರು ತಮ್ಮ. ತಮ್ಮ ಊರುಗಳಲ್ಲಿ ಶ್ರೀ ಸಿದ್ಧಾರೂಢರ ಮಠಗಳನ್ನು ಸ್ಥಾಪಿಸಿ, ಅಲ್ಲಿ ಅಜ್ಜನ ಸಂದೇಶಗಳನ್ನು ಮತ್ತು ಸತ್ಸಂಗಳನ್ನು ಮಾಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಅನೇಕ ಮಠಗಳು ಕಾರ್ಯನಿರ್ವಹಿಸುತ್ತಿವೆ. ಕೈಲಾಸ ಮಂಟಪದಲ್ಲಿ ಶ್ರೀ ಸಿದ್ಧಾರೂಢ ಅಜ್ಜರ ಪವಾಡಗಳ ಚಿತ್ರಣಗಳನ್ನು ಮತ್ತು ಅನೇಕ ವಿವರಗಳನ್ನು ಕಾಣುತ್ತೇವೆ. ಶಿವರಾತ್ರಿ, ಶ್ರಾವಣ ಮಾಸದಲ್ಲಿ ತೆಪ್ಪದ ತೇರು, ಅಮವಾಸ್ಯೆ ಮುಂತಾದ ಮಹತ್ವದ ದಿನಗಳಲ್ಲಿ ಭಕ್ತರು ಬರಿಗಾಲಿನಿಂದ ದೂರ ದೂರದ ಊರುಗಳಿಂದ ಬಂದು ದರ್ಶನ ಪಡೆಯುವ ಪರಂಪರೆ ಇಂದಿಗೂ ಮುಂದುವರೆದಿದೆ. ಜುಲೈ ೨, ೨೦೨೪ ರಂದು ಶ್ರೀ ಸಿದ್ಧಾರೂಢ ಅಜ್ಜನವರ ೫ ರೂ. ಸ್ಟಾಂಪ್ ಅನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
೧೧೦ಕ್ಕೂ ಹೆಚ್ಚಿನ ಗೋವುಗಳು ಈಗ ಮಠದಲ್ಲಿ ಇದ್ದು, ಇನ್ನೂ ಹೆಚ್ಚಿನ ಗೋಶಾಲೆಯನ್ನು ವಿಸ್ತಾರವಾದ ಸ್ಥಳದಲ್ಲಿ ಅಭಿವೃದ್ಧಿಗೊಳಿಸುತ್ತಿದ್ದಾರೆ. ಪ್ರತಿದಿನ ಮಠಕ್ಕೆ ಬರುತ್ತಿರುವ ಭಕ್ತ ಮಹಿಳೆಯರು ಮತ್ತು ಪುರುಷರು ಮಠದ ವಿವಿಧ ಕಾರ್ಯಗಳಲ್ಲಿ ಕೈಜೋಡಿಸುತ್ತಿದ್ದಾರೆ. ಕೆಲವರು ಧವಸ-ಧಾನ್ಯ, ಹೂ-ಮಾಲೆ, ಪತ್ರಿ, ಕಾಯಿ-ಪಲ್ಲೆ ಮುಂತಾದವುಗಳನ್ನು ತಂದು ಸೇವೆಗಳಲ್ಲಿ ತನ್ಮಯರಾಗುತ್ತಾರೆ. ಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ೧೯ಕ್ಕೂ ಕೋಟಿಗೂ ಹೆಚ್ಚಿನ ಹಣದಲ್ಲಿ ನಡೆಯುತ್ತಿದೆ ಎನ್ನುತ್ತಾರೆ ಮಠದ ಧರ್ಮದರ್ಶಿಗಳು. ಶ್ರೀಮಠಕ್ಕೆ ನೀಡುವ ದೇಣಿಗೆಗಳಿಗೆ ಆದಾಯ ಕರ ೮೦ ಜಿ ಪ್ರಕಾರ ತೆರಿಗೆ ವಿನಾಯತಿ ದೊರೆಯುತ್ತವೆ. ಮಠದ ಹೆಚ್ಚಿನ ಮಾಹಿತಿಯನ್ನು ೦೮೩೬-೨೨೦೩೪೮೫, ೨೯೫೫೩೦೩ ವೈಬ್ ಸೈಟ್ www.srisiddharoodhaswamiji.in, , Email:[email protected] ಮೂಲಕ ಪಡೆಯಬಹುದಾಗಿದೆ. ಮಠಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ ಎನ್ನುತ್ತಾರೆ ಮಠದ ಐವರು ಧರ್ಮದರ್ಶಿಗಳು ಮತ್ತು ಸಿಬ್ಬಂದಿ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗಾಗಿ, ವಸತಿ ನಿಲಯ, ಪ್ರಕೃತಿ ಚಿಕಿತ್ಸೆ ವೃದ್ಧಾಶ್ರಮ. ಯೋಗ ಕೇಂದ್ರ, ಗುರುಕುಲ ಮುಂತಾದ ಯೋಜನೆಗಳು ಪ್ರಗತಿ ಪಥದಲ್ಲಿವೆ. ಸಿದ್ಧಾರೂಢ ಮಹಾರಾಜ ಕೀ ಜೈ, ಗುರುನಾಥರೂಢ ಮಹಾರಾಜ ಕೀ ಜೈ. ಹರ ಹರ ಮಹಾದೇವ, ಓಂ ನಮಃ ಶಿವಾಯ ಮಂತ್ರಗಳ ಪಠಣಗಳನ್ನು ಭಕ್ತರು ಮಠದ ಆವರಣದಲ್ಲಿ ನಿರಂತರವಾಗಿ ಪಠಿಸುತ್ತಾರೆ ಮತ್ತು ಅನೇಕ ಭಜನಾ ತಂಡಗಳು ಭಕ್ತಿ ಗೀತೆಗಳನ್ನು ನಿರಂತರವಾಗಿ ಹಾಡುತ್ತಿರುತ್ತಾರೆ.
-ಡಾ. ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ
ನಿಮ್ಮ ಕಾಮೆಂಟ್ ಬರೆಯಿರಿ