ಬೆಳಗಾವಿ | ಉದ್ಯಮಿ ಅಪಹರಣ ; ಬಿಡುಗಡೆ ಮಾಡಲು ₹ 5 ಕೋಟಿ ಬೇಡಿಕೆ

ಬೆಳಗಾವಿ: ಸಿನಿಮೀಯ ರೀತಿಯಲ್ಲಿ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ನಡೆದಿದ್ದು, ಅಪಹರಣಕಾರರು 5 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದೆ. ಬಸವರಾಜ ಅವರ ಫೋನ್ ನಿಂದ ಅವರ ಪತ್ನಿ ಶೋಭಾ ಅವರಿಗೆ ಕರೆ ಮಾಡಿರುವ ಅಪಹರಣಕಾರರು ₹ 5 ಕೋಟಿ ಕೊಟ್ಟರೆ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ಬಸವರಾಜ ಅಂಬಿ ಕಡೆಯವರು ಹಣ ತೆಗೆದುಕೊಂಡು ನಿಪ್ಪಾಣಿಗೆ ಹೋಗಿದ್ದಾರೆ. ಈ ವೇಳೆ ಮತ್ತೆ ಕರೆ ಮಾಡಿದ ಅಪಹರಣಕಾರರು, ಹಣ ತೆಗೆದುಕೊಂಡು ಒಬ್ಬರೇ ಬರುವುದು ಬಿಟ್ಟು ಎಲ್ಲ ಸಂಬಂಧಿಕರನ್ನು ಕರೆ ತಂದಿದ್ದೀರ. ಹೀಗಾಗಿ ನಿಮ್ಮ ಗಂಡನನ್ನು ಕೊಲೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಆತಂಕಗೊಂಡ ಉದ್ಯಮಿ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪಹರಣ ಪ್ರಕರಣದ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ‌ಗುಳೇದ ಅವರು, ಫೆ. 14ರಂದು ಸಾಂಗ್ಲಿಯಿಂದ ವಾಪಸ್​ ಬರುವಾಗ ದುಷ್ಕರ್ಮಿಗಳು ಬಸವರಾಜ​ ಅವರನ್ನು ಕಿಡ್ನಾಪ್​ ಮಾಡಿದ್ದು, 5 ಕೋಟಿ ರೂ.ಗಳಿಗೆ ಭೇಟಿ ಇಟ್ಟಿದ್ದಾರೆ. ಕುಟುಂಬಸ್ಥರು ಮನೆಯಲ್ಲಿದ್ದ 10 ಲಕ್ಷ ರೂ. ತೆಗೆದುಕೊಂಡು ನಿಪ್ಪಾಣಿ ಬೈಪಾಸ್‌ ಬಳಿ ಹೋಗಿದ್ದರು. ಬಸವರಾಜ​ ಮಗ ಹಾಗೂ ಸ್ನೇಹಿತರನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಮತ್ತೆ ಫೋನ್ ಮಾಡಿ ನಾಲ್ಕು ಜನರ ಜೊತೆಗೆ ಯಾಕೆ ಬಂದೀರಿ ಎಂದು ಪ್ರಶ್ನಿಸಿದ್ದು, ಐದು ಕೋಟಿ ರೂಪಾಯಿ ಹಣ ಕೊಡಬೇಕು. ಇಲ್ಲದೆ ಇದ್ದರೆ ಬಸವರಾಜ ಅವರನ್ನು ಕೊಲೆ ಮಾಡುತ್ತೇವೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.
ಅಪಹರಣಕಾರರು ಮಾಡಿರುವ ಫೋನ್ ಕರೆಯ ಜಾಡು ಹಿಡಿದು ಅವರ ಬಂಧನಕ್ಕೆ ಮತ್ತು ಬಸವರಾಜ ಅವರ ಸುರಕ್ಷಿತ ಬಿಡುಗಡೆಗೆ ಗೋಕಾಕ ಮತ್ತು ಚಿಕ್ಕೋಡಿ ಡಿಎಸ್ ಪಿ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಅಪಹರಣಕಾರರು ನಿಪ್ಪಾಣಿಯ ಕರ್ನಾಟಕ ಗಡಿ ಪ್ರದೇಶದಲ್ಲಿ ಗೊತ್ತಾಗಿದೆ. ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವಾಯು ವಿಹಾರಕ್ಕೆ ಹೋಗಿದ್ದ ಕಾರವಾರ ನಗರಸಭೆ ಮಾಜಿ ಸದಸ್ಯನ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement