ಚಾಂಪಿಯನ್ಸ್ ಟ್ರೋಫಿ 2025 : ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದ ಭಾರತ

ನವದೆಹಲಿ: ದುಬೈನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಭರ್ಜರಿ ಜಯಗಳಿಸಿದೆ.
ನಿಗದಿತ ಗುರಿ ಬೆನ್ನಟ್ಟಿದ ಭಾರತವು 45 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 244 ರನ್ ಹೊಡೆದು ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ.
ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮಹಮದ್ ರಿಜ್ವಾನ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಆಜಂ (23 ರನ್) ಮತ್ತು ಇಮಾಮ್ ಉಲ್ ಹಕ್ (10 ರನ್) ಉತ್ತಮ ಆರಂಭ ನೀಡಿದರಾದರೂ ಇಬ್ಬರೂ ಒಬ್ಬರ ಬೆನ್ನಿಗೆ ಒಬ್ಬರು ಪೆವಿಲಿಯನ್ ಗೆ ಮರಳಿದರು. ಬಾಬರ್ ಆಜಂ ಅವರನ್ನು ಹಾರ್ದಿಕ್ ಪಾಂಡ್ಯಾ ಔಟ್ ಮಾಡಿದರೆ, ಇಮಾಮ್ ಉಲ್ ಹಕ್ ರನ್ನು ಅಕ್ಸರ್ ಪಟೇಲ್ ಅದ್ಭುತವಾಗಿ ರನೌಟ್ ಮಾಡಿದರು.

ನಂತರ ಆಡಲು ಬಂದ ಸೌದ್ ಶಕೀಲ್ (62 ರನ್) ಮತ್ತು ನಾಯಕ ಮಹಮದ್ ರಿಜ್ವಾನ್ (46 ರನ್) ರಕ್ಷಣಾತ್ಮಕ ಆಟವಾಡಿದರು. ಈ ಜೋಡಿ 3ನೇ ವಿಕೆಟ್ ಗೆ 104 ರನ್ ಗಳನ್ನು ಸೇರಿಸಿದರು. ರಿಜ್ವಾನ್ ಅವರು ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಅದರ ಬೆನ್ನಿಗೇ ಸೌದ್ ಶಕೀಲ್ ಕೂಡ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಈ ಇಬ್ಬರು ಔಟಾದರ ಬಳಿಕ ಪಾಕಿಸ್ತಾನ ತಂಡದಿಂದ ಪ್ರಭಾವಶಾಲಿ ಬ್ಯಾಟಿಂಗ್ ಬರಲಿಲ್ಲ. ಕುಶ್ದಿಲ್ ಶಾ 38 ರನ್ ಗಳಿಸಿ ಪಾಕ್ ಇನ್ನಿಂಗ್ಸ್ ಗೆ ಜೀವ ತುಂಬುವ ಪ್ರಯತ್ನ ಮಾಡಿದರೂ ಅವರಿಗೆ ಇತರೆ ಆಟಗಾರರಿಂದ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ ಪಅಕಿಸ್ತಾನ 49.4 ಓವರ್ ನಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯಾ 2, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್‌ನಷ್ಟಕ್ಕೆ 244 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಭಾರತದ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 20 ರನ್ ಗೆ ಔಟಾದರು. ನಂತರ ಬಂದ ಕೊಹ್ಲಿ ಹಾಗೂ ಗಿಲ್ ತಾಳ್ಮೆಯ ಬ್ಯಾಟಿಂಗ್ ಮಾಡಿ 46 ರನ್ ಪೇರಿಸಿದರು. ಆದರೆ ಅಬ್ರಾರ್ ಅಹ್ಮದ್ ಬೌಲಿಂಗ್ ನಲ್ಲಿ ಗಿಲ್ ಬೌಲ್ಡ್ ಆದರು. ನಂತರ ಶ್ರೇಯಸ್ ಜೊತೆ ಸೇರಿದ ಕೊಹ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿ ಶತಕ ಸಿಡಿಸುವುದರ ಜೊತೆ ಭಾರತಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ ಅರ್ಧ ಶತಕ ಗಳಿಸಿ ಔಟಾದರು. ಪಾಕ್ ಪರ ಶಾಹಿನ್ ಅಫ್ರಿದಿ 2 ವಿಕೆಟ್ ಪಡೆದರು. ಅಬ್ರಾರ್ ಮತ್ತು ಕುಶ್ದಿಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement