ಪುಣೆ : ವಿದೇಶಿ ಕರೆನ್ಸಿ ಕಳ್ಳಸಾಗಣೆ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಪುಣೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈಗೆ ಪ್ರಯಾಣಿಸುತ್ತಿದ್ದ ಮೂವರು ವಿದ್ಯಾರ್ಥಿನಿಯರು ನೋಟ್‌ಬುಕ್ ಪುಟಗಳಲ್ಲಿ ಬಚ್ಚಿಟ್ಟ ₹ 3.47 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.
ಪುಣೆ ಕಸ್ಟಮ್ಸ್ ಈ ಹಿಂದೆ ಟ್ರಾವೆಲ್ ಏಜೆಂಟ್‌ನನ್ನು ಬಂಧಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಅಕ್ರಮ ಹಣ ವರ್ಗಾವಣೆಯ ಕುರಿತು ಹೆಚ್ಚಿನ ತನಿಖೆಗೆ ಕಾರಣವಾಯಿತು. ತನಿಖೆಯ ಸಂದರ್ಭದಲ್ಲಿ, ಮುಂಬೈನಿಂದ ಮೂವರು ವಿದ್ಯಾರ್ಥಿನಿಯರು ಮತ್ತು ವಿದೇಶೀ ವಿನಿಮಯ ವ್ಯಾಪಾರಿ ದುಬೈಗೆ ಪ್ರಯಾಣಿಸಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು.
ವಿದ್ಯಾರ್ಥಿನಿಯರು ಕೊಂಡೊಯ್ಯುವ ನೋಟ್‌ಬುಕ್‌ಗಳಲ್ಲಿ ದೊಡ್ಡ ಮೊತ್ತದ ವಿದೇಶಿ ಕರೆನ್ಸಿ ಕಳ್ಳಸಾಗಣೆಯಾಗುತ್ತಿದೆ ಎಂದು ಪುಣೆ ಕಸ್ಟಮ್ಸ್‌ಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯ ಮೇರೆಗೆ ಭಾರತೀಯ ಅಧಿಕಾರಿಗಳು ದುಬೈಗೆ ಆಗಮಿಸಿದ ನಂತರ ವಿದ್ಯಾರ್ಥಿಗಳನ್ನು ತಡೆದು ಭಾರತಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಫೆಬ್ರವರಿ 17 ರಂದು ಹಿಂದಿರುಗಿದ ನಂತರ, ಏರ್ ಇಂಟೆಲಿಜೆನ್ಸ್ ಯುನಿಟ್ (AIU) ಅಧಿಕಾರಿಗಳು ಮೂವರು ವಿದ್ಯಾರ್ಥಿನಿಯರನ್ನು ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಅವರ ಸಾಮಾನು ಸರಂಜಾಮುಗಳ ವಿವರವಾದ ಹುಡುಕಾಟದ ನಂತರ 4,00,100 ಡಾಲರ್ (ಅಂದಾಜು ₹3.47 ಕೋಟಿ) ಅವರ ಅನೇಕ ನೋಟ್‌ಬುಕ್‌ಗಳ ಪುಟಗಳ ನಡುವೆ ಕಂಡುಬಂದಿದೆ.
ಎಲ್ಲಾ ಮೂವರು ವಿದ್ಯಾರ್ಥಿನಿಯರು ಸ್ನಾತಕೋತ್ತರ ಅಧ್ಯಯನವನ್ನು ಮಾಡುತ್ತಿದ್ದಾರೆ ಮತ್ತು ಇವರನ್ನು ಏರ್ ಇಂಟೆಲಿಜೆನ್ಸ್ ಯುನಿಟ್ (AIU) ಅಧಿಕಾರಿಗಳು ವಿಚಾರಣೆ ನಡೆಸಿದರು. ವಿಚಾರಣೆಯ ಸಮಯದಲ್ಲಿ, ಪುಣೆ ಮೂಲದ ಟ್ರಾವೆಲ್ ಏಜೆಂಟ್ ಖುಷ್ಬು ಅಗರ್ವಾಲ್ ಎಂಬವರ ಮೂಲಕ ತಮ್ಮ ಪ್ರವಾಸವನ್ನು ಬುಕ್ ಮಾಡಲಾಗಿದೆ ಎಂದು ಅವರು ಮಾಹಿತಿ ಬಹಿರಂಗಪಡಿಸಿದರು. ಅಗರ್ವಾಲ್ ಅವರು ತಾವು ಪ್ರಯಾಣಿಸುವ ಮೊದಲು ಬಚ್ಚಿಟ್ಟ ಈ ಹಣವಿದ್ದ ಬ್ಯಾಗ್‌ಗಳನ್ನು ತಮ್ಮ ಕೈಗೆ ನೀಡಿದ್ದರು ಹಾಗೂ ಇದರಲ್ಲಿ ದುಬೈನ ಕಚೇರಿಯಲ್ಲಿ ತುರ್ತಾಗಿ ಬೇಕಾಗಿರುವ ತನ್ನ ಕಚೇರಿ ದಾಖಲೆಗಳಿವೆ ಎಂದು ಅವರು ಹೇಳಿದ್ದರು ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ತಮ್ಮ ಬ್ಯಾಗ್‌ಗಳಲ್ಲಿ ವಿದೇಶಿ ಕರೆನ್ಸಿ ಬಚ್ಚಿಟ್ಟಿರುವುದು ವಿದ್ಯಾರ್ಥಿನಿಯವರಿಗೆ ತಿಳಿದಿರಲಿಲ್ಲ” ಎಂದು ಏರ್ ಇಂಟೆಲಿಜೆನ್ಸ್ ಯುನಿಟ್ ಮೂಲಗಳು ತಿಳಿಸಿವೆ.
ಹೆಚ್ಚಿನ ವಿಚಾರಣೆ ಮತ್ತು ತನಿಖೆಯ ಆಧಾರದ ಮೇಲೆ, ಹುಡುಕಾಟ ತಂಡವು ಮುಂಬೈನ ಫಾರೆಕ್ಸ್ ಸಂಸ್ಥೆಗೆ ಧಾವಿಸಿತು ಮತ್ತು ಈ ವಿದೇಶಿ ಕರೆನ್ಸಿಯನ್ನು ಪೂರೈಸಿದ ಮೊಹಮ್ಮದ್ ಅಮೀರ್ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು.
ಸಂಸ್ಥೆಯ ಹುಡುಕಾಟದ ಸಮಯದಲ್ಲಿ, ಆವರಣದಲ್ಲಿ ವಿವಿಧ ದೇಶಗಳ ವಿದೇಶಿ ಕರೆನ್ಸಿಗಳು (ಸುಮಾರು 45 ಲಕ್ಷ ರೂ.ಗಳಿಗೆ ಸಮಾನ) ಸಹ ಕಂಡುಬಂದಿವೆ. ಪುಣೆ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಅಧಿಕಾರಿಗಳು ಮತ್ತು ಕಸ್ಟಮ್ಸ್ ಪುಣೆ, ಮುಂಬೈ, ಅಹಮದಾಬಾದ್ ಅಧಿಕಾರಿಗಳು ಪುಣೆ, ಅಹಮದಾಬಾದ್ ಮತ್ತು ಮುಂಬೈನಲ್ಲಿ 10 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನು ( ಖುಷ್ಬೂ ಅಗರ್ವಾಲ್ ಮತ್ತು ಅಮೀರ್) ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು 6 ದಿನಗಳ ಕಸ್ಟಮ್ಸ್ ಕಸ್ಟಡಿಗೆ ನೀಡಿತು. ಫೆಬ್ರವರಿ 24ರಂದು ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು; ಪ್ರಸ್ತುತ ಅವರನ್ನು ಯರವಾಡ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಪುಣೆ ಕಸ್ಟಮ್ಸ್ (ವಿಮಾನ ನಿಲ್ದಾಣ) ತಂಡದಿಂದ ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಶಂಕಿತ ಹವಾಲಾ ಜಾಲಕ್ಕೆ ಸಂಬಂಧಿಸಿದ ಟ್ರಾವೆಲ್ ಏಜೆಂಟ್ ಮತ್ತು ಇತರರು ಭಾಗಿಯಾಗಿರುವ ಬಗ್ಗೆ ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ