ಶಿರಸಿ | ನರ್ಮದಾ ಹೆಗಡೆಗೆ ಚೆನ್ನಭೈರಾದೇವಿ ಪ್ರಶಸ್ತಿ ಪ್ರದಾನ

ಶಿರಸಿ : ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕೊಡಮಾಡುವ 2025ನೇ ಸಾಲಿನ ಚೆನ್ನಭೈರಾದೇವಿ ಪ್ರಶಸ್ತಿಯನ್ನು ಶಿರಸಿಯ ಅಜಿತ ಮನೋಚೇತನ ಟ್ರಸ್ಟ್‌ನ ವಿಕಾಸ ವಿಶೇಷ ಶಾಲೆಯ ಮುಖ್ಯಾಧ್ಯಾಪಕಿ ನರ್ಮದಾ ಹೆಗಡೆ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.
ವಿಶೇಷ ಚೇತನ ಮಕ್ಕಳಿಗೆ ನರ್ಮದಾ ಹೆಗಡೆ ಸಲ್ಲಿಸುತ್ತ ಬಂದಿರುವ ಸೇವೆಯನ್ನು ಗುರುತಿಸಿ ಇಲ್ಲಿನ ಗಣೇಶ ನೇತ್ರಾಲಯದ ನಯನಾ ಸಭಾಂಗಣದಲ್ಲಿ ಭಾನುವಾರು (ಮಾ . ೨) ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಚೆನ್ನಬೈರಾದೇವಿ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಖ್ಯಾತ ಸಾಹಿತಿ ಗಜಾನನ ಶರ್ಮ ಅವರು, ಉತ್ತರ ಕನ್ನಡದ, ವಿಶಿಷ್ಟ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಅವರಿಗೆ ಈ ಜಿಲ್ಲೆಯ ಐಕಾನ್‌ ಆಗಿದ್ದ ಅವ್ವರಸಿ ರಾಣಿ ಚೆನ್ನಭೈರಾದೇವಿ ಹೆಸರಿನಲ್ಲಿ ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ ನೀಡುತ್ತಿರುವುದನ್ನು ನೋಡಿದರೆ ತಾನು ರಾಣಿ ಚೆನ್ನಭೈರಾದೇವಿ ಕಾದಂಬರಿ ಬರೆದದ್ದು ಸಾರ್ಥಕವಾಯಿತು ಎಂದು ಅನ್ನಿಸುತ್ತಿದೆ ಎಂದರು.

ವಿಶೇಷ ಮನೋಚೇತನ ಮಕ್ಕಳಿಗೆ ತರಬೇತಿ ನೀಡುವ ಅದ್ಭುತ ಕೆಲಸ ಮಾಡುತ್ತಿರುವ ನರ್ಮದಾ ಹೆಗಡೆ ಅವರಿಗೆ ಈ ಪ್ರಶಸ್ತಿ ನೀಡುವುದು ಅದು ತಾಯ್ತನಕ್ಕೆ ನೀಡಿದ ಪ್ರಶಸ್ತಿ ಎಂದು ವ್ಯಾಖ್ಯಾನಿಸಿದ ಅವರು, ಅಂತಹ ಮಕ್ಕಳಿಗೆ ಕೇವಲ ಶಿಕ್ಷಕಿಯಾಗಿ ಮಾತ್ರವಲ್ಲ, ತಾಯಿಯಾಗಿಯೂ ನಿಲ್ಲುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹಿಂಸಾತ್ಮಕವಾಗಿಯೂ ವರ್ತಿಸುವ ಇಂತಹ ಮಕ್ಕಳನ್ನು ತಾಯಿಯ ಪ್ರೀತಿಯಿಂದಲೇ ನಿಯಂತ್ರಿಸಬೇಕಾಗುತ್ತದೆ ಎಂದವರು ಹೇಳಿದರು.
ರಾಣಿ ಚೆನ್ನಭೈರಾದೇವಿ ೫೦೦ ವರ್ಷಗಳ ಹಿಂದೆಯೇ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಆಗ ಪೋರ್ಚಗೀಸರು ಇಲ್ಲಿನ ಹೆಣ್ಣುಮಕ್ಕಳನ್ನು ಹೊತ್ತೊಯ್ಯುತ್ತಿದ್ದಾಗ ಅವರ ರಕ್ಷಣೆಗೆ ಕಟಿಬದ್ಧರಾದ ರಾಣಿ ಚೆನ್ನಭೈರಾದೇವಿ ಮಹಿಳೆಯರ ರಕ್ಷಣೆಗೆ ಅನೇಕ ಕ್ರಮ ಕೈಗೊಂಡಿದ್ದು ಮಾತ್ರವಲ್ಲದೆ ಅವರ ಸಬಲೀಕರಣಕ್ಕೆ ಸ್ವಯಂ ರಕ್ಷಣಾ ತರಬೇತಿಯನ್ನೂ ನೀಡಿದ್ದರು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನರ್ಮದಾ ಹೆಗಡೆಯವರು, ನಾನು ಅಜಿತ ಮನೋಚೇತನ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಮಕ್ಕಳ ಪರವಾಗಿ ಈ ಪ್ರಶಸ್ತಿ ಸ್ವೀಕರಿಸುತ್ತೇನೆ ಎಂದು ಹೇಳಿದರು. ಅವರು ಬುದ್ಧಿಮಾಂದ್ಯ ಮಕ್ಕಳಂತೆ ಕಂಡರೂ ಅವರಲ್ಲಿಯೂ ಬುದ್ಧಿವಂತಿಕೆ ಇರುತ್ತದೆ, ಆದರೆ ಅವರಿಗೆ ತರಬೇತಿ ಬೇಕು ಅಷ್ಟೆ. ಏನೂ ಕಪಟ, ಮೋಸ ಅರಿಯದ ಅವರು ನಿಜವಾಗಿಯೂ ದೇವರ ಮಕ್ಕಳು. ನಾನು ೨೩ ವರ್ಷಗಳಿಂದ ಇಂತಹ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ಇಂತಹ ಮಕ್ಕಳನ್ನು ಯಾರಾದರೂ ಅಪಹಾಸ್ಯ ಮಾಡಿದರೆ ಕೋಪ ಬರುತ್ತಿತ್ತು. ಕೆಲವೊಮ್ಮೆ ಅಪಹಾಸ್ಯ ಮಾಡಿದವರನ್ನು ಪ್ರಶ್ನಿಸಿದ್ದೂ ಇದೆ. ನಮ್ಮಿಂದ ತರಬೇತಿ ಪಡೆದ ಮಕ್ಕಳು ಈ ಜಗತ್ತಿಗೆ ಸ್ಪಂದಿಸಿದರೆ, ತಮ್ಮ ಪ್ರೀತಿಯ ಭಾವವನ್ನು ಇತರರೊಂದಿಗೆ ವ್ಯಕ್ತಪಡಿಸಿದರೆ ಅದು ನಮಗೆ ಗೌರವ ಡಾಕ್ಟರೇಟ್‌ಕೊಟ್ಟಂತೆ ಎಂದರು.

ಮುಂಬೈನ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಾಶಿಸಿದ, ವಿಶ್ವನಾಥ ದೊಡ್ಮನೆ ಅವರ ಸಂಪಾದನೆಯ ʼಹೊರನಾಡಿನಲ್ಲಿ ತುಳುವರುʼ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ವಿಶ್ರಾಂತ ಪತ್ರಿಕಾ ಸಂಪಾದಕ ಅಶೋಕ ಹಾಸ್ಯಗಾರ, ಈ ಪುಸ್ತಕ ಹೊರ ರಾಜ್ಯದಲ್ಲಿ ನೆಲೆಸಿರುವ, ವಿಶೇಷವಾಗಿ ಮುಂಬೈನಲ್ಲಿ ನೆಲೆಸಿರುವ ತುಳುವರ ಬದುಕು ಹಾಗೂ ಸಂಸ್ಕೃತಿ ಬಗ್ಗೆ ಹೆಚ್ಚು ಪ್ರಸ್ತಾಪಿಸುತ್ತದೆ. ತುಳು ನಾಡಿನಿಂದ ವಲಸೆ ಹೋಗಿ ಬೇರೆಬೇರೆ ರಾಜ್ಯಗಳಲ್ಲಿ ನೆಲೆಸಿರುವ ತುಳುವರು ಉಳಿಸಿಕೊಂಡು ಬಂದ ಸಾಮಾಜಿಕ, ಸಾಂಸ್ಕೃತಿಕ ಜೀವನದ ಬಗ್ಗೆ ಪುಸ್ತಕದಲ್ಲಿ ಕಟ್ಟಿಕೊಡಲಾಗಿದೆ ಎಂದರು.
ಹಿರಿಯ ರೋಟರಿ ಸದಸ್ಯ ರವಿ ಹೆಗಡೆ ಗಡಿಹಳ್ಳಿ ಶುಭಾಶಂಸನೆ ಗೈದರು. ಸಾಹಿತಿ ಜಯಪ್ರಕಾಶ ಹಬ್ಬು ನಿರೂಪಿಸಿದರು. ವಿಶ್ವನಾಥ ಹೆಗಡೆ ದೊಡ್ಮನೆ ಪ್ರಾಸ್ತಾವಿಕ ಮಾತನಾಡಿದರು. ಜಿ.ವಿ.ಹೆಗಡೆ ಕೊಪ್ಪಲತೋಟ ಸ್ವಾಗತಿಸಿದರು. ಕೇಶವ ಕಿಬ್ಳೆ ವಂದಿಸಿದರು. ಯಶಸ್ವಿನಿ ಶ್ರೀಧರಮೂರ್ತಿ ಸನ್ಮಾನ ಪತ್ರ ಓದಿದರು. ರಾಜಲಕ್ಷ್ಮೀ ಭಟ್‌ ಬೊಮ್ನಳ್ಳಿ ಪ್ರಾರ್ಥಿಸಿದರು. ಸಭಾಕಾರ್ಯಕ್ರಮದ ನಂತರ ದೊಡ್ಮನೆಯ ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಸಂಘದವರಿಂದ ಚೆನ್ನಭೈರಾದೇವಿ ಆಖ್ಯಾನದ ತಾಳಮದ್ದಲೆ ನಡೆಯಿತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement