ಬೆಳಗಾವಿ | ಪ್ರೇಯಸಿಯ ಕತ್ತು ಸೀಳಿ ಸಾಯಿಸಿ ಅದೇ ಚೂರಿಯಿಂದ ತಾನೂ ಇರಿದುಕೊಂಡು ಸಾವಿಗೀಡಾದ ಪ್ರೇಮಿ…!

 ಬೆಳಗಾವಿ: ಮದುವೆಗೆ ಒಪ್ಪದ ಪ್ರಿಯತಮೆಗೆ ಚೂರಿ ಇರಿದು ಕೊಲೆ ಮಾಡಿದ ಯುವಕ, ಅದೇ ಚೂರಿಯಿಂದ ತಾನೂ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಶಹಾಪುರದ ನವಿ ಗಲ್ಲಿ ಮನೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ.
ಶಹಾಪುರದ ನಾಥ ಪೈ ವೃತ್ತದ ನಿವಾಸಿ ಐಶ್ವರ್ಯಾ ಮಹೇಶ ಲೋಹಾರ (18) ಎಂಬವರು ಕೊಲೆಯಾದ ಯುವತಿ. ಯಳ್ಳೂರ ಗ್ರಾಮದ ಪ್ರಶಾಂತ ಯಲ್ಲಪ್ಪ ಕುಂಡೇಕರ (29) ಆತ್ಮಹತ್ಯೆ ಮಾಡಿಕೊಂಡ ಯವಕನಾಗಿದ್ದಾನೆ.
ಐಶ್ವರ್ಯಾ ಮತ್ತು ಪ್ರಶಾಂತ ಇಬ್ಬರೂ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು. ಶಿಕ್ಷಣ ಮುಗಿಸಿದ ಬಳಿಕ ಪ್ರಶಾಂತ ಬೆಳಗಾವಿಯಲ್ಲಿ ಪೇಂಟ‌ರ್ ಆಗಿದ್ದರು. ಮದುವೆಗೆ ಯುವತಿಯ ತಾಯಿ ವಿರೋಧವಿತ್ತು. ಯುವತಿ ಇನ್ನೂ ಚಿಕ್ಕವಳಿದ್ದು, ಉತ್ತಮ ಭವಿಷ್ಯವಿದೆ. ನೀನು ಹೆಚ್ಚು ಗಳಿಸಿ ನಿನ್ನ ಕಾಲ ಮೇಲೆ ನಿಂತುಕೊಂಡ ಮೇಲೆ ನೋಡೋಣ ಎಂದು ಹೇಳಿದ್ದರು. ಇದೇ ವಿಚಾರವಾಗಿ ಯುವಕ- ಯುವತಿ ಮಧ್ಯೆ ಜಗಳವಾಗಿತ್ತು ಎಂದು ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.
ಮಂಗಳವಾರ ಐಶ್ವರ್ಯ ಅವರು ತಮ್ಮ ಚಿಕ್ಕಮ್ಮನ ಮನೆಗೆ ಯುವಕನನ್ನು ಕರೆಸಿಕೊಂಡು ಮಾತನಾಡಲು ಯತ್ನಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆಯಿತು. ಸಂಜೆ 5:30ರ ಸುಮಾರಿಗೆ ಪ್ರಶಾಂತ ಚೂರಿಯಿಂದ ಐಶ್ವರ್ಯ ಕುತ್ತಿಗೆ ಭಾಗಕ್ಕೆ ಚಿಚ್ಚಿದ್ದು, ತಕ್ಷಣವೇ ತನ್ನ ಕುತ್ತಿಗೆಗೆ ಚುಚ್ಚಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದರು.
ಯುವಕ- ಯುವತಿ ಭೇಟಿಯಾದ ಕೋಣೆಯಲ್ಲಿ ಒಂದು ವಿಷದ ಬಾಟಲಿಯೂ ಸಿಕ್ಕಿದೆ. ಯುವತಿಗೆ ವಿಷ ಕುಡಿಸಲು ಒತ್ತಾಯ ಮಾಡಿರಬಹುದು. ಅದು ಸಾಧ್ಯವಾಗದೇ ಚೂರಿ ಇರಿದಿದ್ದಾನೆ. ಮೊದಲು ಕೊಲೆ ಪ್ರಕರಣ ದಾಖಲಿಸಿ, ಬಳಿಕ ಆರೋಪಿಯ ಆತ್ಮಹತ್ಯೆ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಡಿಸಿಪಿ ರೋಹನ್ ಜಗದೀಶ್, ಸಿಪಿಐ ಎಸ್.ಎಸ್.ಸಿಮಾನಿ, ಎಸಿಪಿ ಸಂತೋಷ ಸತ್ಯ ನಾಯಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement