ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಇಬ್ಬರು ಪತ್ರಕರ್ತರನ್ನು ಬುಧವಾರ ಬಂಧಿಸಿದ್ದಾರೆ.
ಪಲ್ಸ್ ನ್ಯೂಸ್ ಎಂಡಿ ಪಿ. ರೇವತಿ ಮತ್ತು ಪಲ್ಸ್ ನ್ಯೂಸ್ ವರದಿಗಾರ್ತಿ ಬಂಡಿ ಸಂಧ್ಯಾ ಬಂಧಿತ ಪತ್ರಕರ್ತರಾಗಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ವಿಎಸ್ ವಂಶಿ ಕಿರಣ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ವೀಡಿಯೊ ಮಾನಹಾನಿಕರವಾಗಿದ್ದು, ಸುಳ್ಳು ಪ್ರಚಾರದ ಗುರಿಯನ್ನು ಹೊಂದಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ, ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ವಿರುದ್ಧ ಅವಹೇಳನಕಾರಿ ಮತ್ತು ನಿಂದನೀಯ ಟೀಕೆಗಳನ್ನು ಮಾಡಿದ್ದಾರೆ, ಇದು ಪಲ್ಸ್ ಟಿವಿ ಚಾನೆಲ್ ಉದ್ದೇಶಪೂರ್ವಕವಾಗಿ ಮಾನಹಾನಿ ಮತ್ತು ಸುಳ್ಳು ಪ್ರಚಾರವನ್ನು ಹರಡುವ ಪ್ರಯತ್ನವನ್ನು ಸೂಚಿಸುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹೈದರಾಬಾದ್ ನಗರದ ಹೆಚ್ಚುವರಿ ಪೊಲೀಸ್ ಅಪರಾಧಗಳ (ಅಪರಾಧಗಳು ಮತ್ತು ಎಸ್‌ಐಟಿ) ವಿಭಾಗದ ಪೊಲೀಸ್ ಅಧಿಕಾರಿ ಪಿ ವಿಶ್ವಪ್ರಸಾದ ಅವರು, ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ಅವರಿಗೆ ಹಣ ನೀಡಿದೆ ಎಂಬುದಕ್ಕೆ ಪೊಲೀಸರ ಬಳಿ ಪುರಾವೆಗಳಿವೆ ಎಂದು ಹೇಳಿದ್ದಾರೆ.
ಬಂಜಾರಾ ಹಿಲ್ಸ್‌ನಲ್ಲಿರುವ ಬಿಆರ್‌ಎಸ್ ಪಕ್ಷದ ಕಚೇರಿಯಲ್ಲಿ ಚಿತ್ರೀಕರಿಸಿದ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಅವರು ಹೇಳಿದರು.
ಪೊಲೀಸರು ಬಿಎನ್‌ಎಸ್‌ನ ಸೆಕ್ಷನ್ 111, 61 (2), 353 (2), 352 ಮತ್ತು ಐಟಿಯ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಪತ್ರಕರ್ತರನ್ನು ಮಾರ್ಚ್ 26 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದೇ ವೇಳೆ, ಪತ್ರಕರ್ತರಾದ ರೇವತಿ ಮತ್ತು ಸಂಧ್ಯಾ ಅವರ ಅಕ್ರಮ ಬಂಧನವನ್ನು ಬಿಆರ್‌ಎಸ್ ಕಾರ್ಯಾಧ್ಯಕ್ಷರಾದ ಕೆ.ಟಿ.ರಾಮರಾವ್ ಖಂಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ