ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ ; ನಟೋರಿಯಸ್‌ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಕಾಲಿಗೆ ಗುಂಡೇಟು

ಉಡುಪಿ : ಕೆಲವು ದಿನಗಳ ಹಿಂದೆ ಮಣಿಪಾಲ ಪೊಲೀಸರು ಹಾಗೂ ನೆಲಮಂಗಲದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ನಟೋರಿಯಸ್‌ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು ಆತನನ್ನು ಹೆಡೆಮುರಿ ಕಟ್ಟಿದ್ದಾರೆ.
ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಇಸಾಕ್ ಹಿರಿಯಡ್ಕದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ಇಸಾಕ್ ಮಣಿಪಾಲದಲ್ಲಿ ಕಾಣಿಸಿಕೊಂಡಿದ್ದ. ದರೋಡೆ ಪ್ರಕರಣವೊಂದರ ಸಂಬಂಧ ಪೊಲೀಸರು ಈತನನ್ನು ಹುಡುಕುತ್ತಿದ್ದರು. ಆದರೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಈತ ತಾನು ಚಲಾಯಿಸುತ್ತಿದ್ದ ಜೀಪ್‌ ಅನ್ನು ಹಲವು ವಾಹನಗಳಿಗೆ ಡಿಕ್ಕಿ ಹೊಡೆಸಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಆದರೆ ಪೊಲೀಸರು ತಂಡ ರಚಿಸಿ ಈತನ ಹುಡುಕಾಟ ನಡೆಸುತ್ತಿದ್ದರು.

8 ದಿನಗಳ ಬಳಿಕ ಪೊಲೀಸರು ಇಸಾಕ್ ನನ್ನ ಪತ್ತೆ ಮಾಡಿದ್ದಾರೆ. ಬುಧವಾರ ಮಧ್ಯಾಹ್ನ ಹಾಸನ ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ಮಣಿಪಾಲದ ಪೊಲೀಸರ ತಂಡ ಬಂಧಿಸಿದೆ. ಬಳಿಕ ಆರೋಪಿಗಳನ್ನು ಮಣಿಪಾಲಕ್ಕೆ ಕರೆತರುವ ವೇಳೆ ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಆರೋಪಿ ಇಸಾಕ್ ಮೂತ್ರ ಬರುತ್ತದೆ ಹಾಗೂ ವಾಂತಿ ಬರುತ್ತದೆ ಎಂದು ಹೇಳಿದ್ದ. ಆಗ ವಾಹನ ನಿಲ್ಲಿಸಿದಾಗ ಮತ್ತೆ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಣಿಪಾಲದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸರು ಎಚ್ಚರಿಕೆ ನೀಡಿದರೂ ಆತ ಅದನ್ನು ಕೇಳಲಿಲ್ಲ. ಹೀಗಾಗಿ ಪೊಲೀಸರು ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಸದ್ಯ ಇಸಾಕ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಪೊಲೀಸರು ಈತನ ವಿಚಾರಣೆ ನಡೆಸಲಿದ್ದಾರೆ.

ಪ್ರಮುಖ ಸುದ್ದಿ :-   ಹಿರಿಯ ಸಾಹಿತಿ, ಬಹು ಭಾಷಾ ಪಂಡಿತ ಡಾ. ಪಂಚಾಕ್ಷರಿ ಹಿರೇಮಠ ವಿಧಿವಶ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement