ಮಂಗಳೂರು : ಬಿಎಸ್‌ಎನ್‌ಎಲ್ (BSNL) ನಿವೃತ್ತ ಉದ್ಯೋಗಿಯೊಬ್ಬರು ತಮ್ಮ ಕಾರನ್ನು ತಮ್ಮ ಪಕ್ಕದವ ಮನೆಯವರ ಮೋಟರ್ ಬೈಕ್‌ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಕೊಲ್ಲು ಪ್ರಯತ್ನಕ್ಕೆ ಮುಂದಾಗಿದ್ದು, ಆದರೆ ಅದರ ಬದಲು ಸಮೀಪ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿದ್ದಾರೆ. ಈ ಎದೆ ಝಲ್ ಎನಿಸುವಂಥ ಭೀಕರ ಅಪಘಾತ ಸಿಸಿ ಟಿವಿ ಕ್ಯಾಮೆರದಲ್ಲೂ ಸೆರೆಯಾಗಿದೆ.
ಪೊಲೀಸರು ಆತನ ಮೇಲೆ ಕೊಲೆ ಯತ್ನ ಮತ್ತು ನಿರ್ಲಕ್ಷ್ಯದ ಚಾಲನೆ ಆರೋಪ ಹೊರಿಸಿದ್ದಾರೆ.
ಮಾರ್ಚ್ 13 ರಂದು ಈ ಘಟನೆ ನಡೆದಿದ್ದು, ಬಿಜೈ ಕಾಪಿಕಾಡ್ ನ 6ನೇ ಮುಖ್ಯರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು, 69 ವರ್ಷದ ಬಿಜೈ ಮೂಲದ ಸತೀಶಕುಮಾರ ಕೆ.ಎಂ. ಆರೋಪಿಯಾಗಿದ್ದಾನೆ.
ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ ಅವರನ್ನು ಕೊಲ್ಲಲು ಸತೀಶಕುಮಾರ ಎಂಬಾತ ಸ್ಕೆಚ್ ಹಾಕಿದ್ದ. ಅದರಂತೆ ಗುರುವಾರ ಮುರಳಿ ಪ್ರಸಾದ ಬೈಕ್ನಲ್ಲಿ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಸತೀಶಕುಮಾರ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ. ಆದರೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಮಹಿಳೆ ಮನೆಯೊಂದರ ಕಂಪೌಂಡ್ ಮೇಲೆ ನೇತಾಡಿದ್ದಾರೆ. ಈ ಹಿಂದೆ 2023ರಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಮುರಳಿ ಪ್ರಸಾದ ಅವರ ತಂದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ವಿಚಾರವಾಗಿ ಕಳೆದ 6 ವರ್ಷಗಳಿಂದ ಈ ಎರಡು ಮನೆಯವರ ಮಧ್ಯೆ ಜಗಳವಿತ್ತು. ಗುರುವಾರ ಬೆಳಗ್ಗೆ 8:15ರ ಸುಮಾರಿಗೆ ಮುರಳಿ ಪ್ರಸಾದ ಅವರು ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದರು. ವೈಷಮ್ಯದ ಕಾರಣದಿಂದ ಅವರು ಮೋಟರ್ ಸೈಕಲ್‌ನಲ್ಲಿ ಹೋಗುವುದನ್ನೇ ಕಾಯುತ್ತಿದ್ದ ಸತೀಶಕುಮಾರ ತನ್ನ ಕಾರನ್ನು ಮುರಳಿಪ್ರಸಾದ ಕಡೆಗೆ ವೇಗವಾಗಿ ನುಗ್ಗಿಸಿ ಉದ್ದೇಶಪೂರ್ವಕವಾಗಿ ಮುರಳಿಗೆ ಡಿಕ್ಕಿ ಹೊಡೆಸಿದ್ದಾನೆ. ಆದರೆ ಈ ಘಟನೆಯಲ್ಲಿ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡರು. ಡಿಕ್ಕಿಯ ರಭಸಕ್ಕೆ ಹಾರಿಬಿದ್ದ ಮಹಿಳೆ ಮನೆಯೊಂದರ ಕಂಪೌಂಡ್ ಮೇಲೆ ನೇತಾಡಿದ್ದಾರೆ.
ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಳಿ ಪ್ರಸಾದ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ ಪೊಲೀಸರು ಸತೀಶಕುಮಾರ ಕೆಎಂ ಅವರನ್ನು ಬಂಧಿಸಿ ಅವರ ಕಾರನ್ನು ವಶಪಡಿಸಿಕೊಂಡಿದ್ದಾರೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪಾದಚಾರಿಯೊಬ್ಬರಿಗೆ ಗಾಯಗೊಳಿಸಿದ್ದಕ್ಕಾಗಿ ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ಮುಂದಿನ ವಿಚಾರಣೆಯ ತನಕ ಜೈಲಿಗೆ ಕಳುಹಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ