‘ಭಾರತದ ಮಗಳು…ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿ’ : ಸುನೀತಾ ವಿಲಿಯಮ್ಸ್‌ಗೆ ಪ್ರಧಾನಿ ಮೋದಿ ಪತ್ರ

ನವದೆಹಲಿ: ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿದ್ದು, ಈಗ ಅಲ್ಲಿಂದ ಭೂಮಿಗೆ ವಾಪಸಾಗಲು ಮಂಗಳವಾರ ಪ್ರಯಾಣ ಆರಂಭಿಸಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕ ಪತ್ರ ಬರೆದಿದ್ದಾರೆ.
ಮಾರ್ಚ್ 18 ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಪತ್ರದಲ್ಲಿ, ಕಳೆದ ವರ್ಷ ಜೂನ್ 5 ರಂದು ಆರ್ಬಿಟಲ್ ಲ್ಯಾಬ್‌ಗೆ ಹಾರಿದ ಸುನಿತಾ ವಿಲಿಯಮ್ಸ್ ಅವರ ಯೋಗಕ್ಷೇಮದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ನಿಕಟಪೂರ್ವ ಅಧ್ಯಕ್ಷ ಜೋ ಬೈಡನ್‌ ಅವರ ಭೇಟಿಗೆ ಅಮೆರಿಕಕ್ಕೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಚಾರಿಸಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.
ಸುನಿತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಿಂದ ಭೂಮಿಗೆ ವಾಪಸಾಗಲು 17-ಗಂಟೆಗಳ ಪ್ರವಾಸಕ್ಕಾಗಿ ಅನ್‌ಡಾಕ್ ಮಾಡಿದ ಗಂಟೆಗಳ ನಂತರ ಪತ್ರವನ್ನು ಸಾರ್ವಜನಿಕಗೊಳಿಸಲಾಯಿತು.

ಈ ತಿಂಗಳು ದೆಹಲಿಯಲ್ಲಿ ಮಾಜಿ ನಾಸಾ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಅವರೊಂದಿಗೆ ನಡೆದ ಸಭೆಯಲ್ಲಿ ಅವರ ಚರ್ಚೆಯಲ್ಲಿ ಸುನಿತಾ ಹೆಸರು ಬಂದಿರುವುದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ.
“ನಿಮ್ಮ ಮತ್ತು ನಿಮ್ಮ ಕೆಲಸದ ಬಗ್ಗೆ ನಾವು ಎಷ್ಟು ಹೆಮ್ಮೆಪಡುತ್ತೇವೆ ಎಂದು ನಾವು ಚರ್ಚಿಸಿದ್ದೇವೆ. ಈ ಸಂವಾದದ ನಂತರ, ನಾನು ನಿಮಗೆ ಪತ್ರ ಬರೆಯುವುದನ್ನು ತಡೆಯಲು ಸಾಧ್ಯವಾಗಲಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “140 ಕೋಟಿ ಭಾರತೀಯರು ಯಾವಾಗಲೂ ನಿಮ್ಮ ಸಾಧನೆಗಳ ಬಗ್ಗೆ ಬಹಳ ಹೆಮ್ಮೆಪಡುತ್ತಾರೆ. ಇತ್ತೀಚಿನ ಬೆಳವಣಿಗೆಗಳು ನಿಮ್ಮ ಸ್ಪೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನು ಮತ್ತೊಮ್ಮೆ ಪ್ರದರ್ಶಿಸಿವೆ” ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಆಕೆಯ ತಾಯಿ ಬೋನಿ ಪಾಂಡ್ಯ ಅವರು ಸುನಿತಾ ಹಿಂದಿರುಗಲು “ಉತ್ಸಾಹದಿಂದ” ಕಾಯುತ್ತಿರಬೇಕು ಎಂದು ಅವರು ಹೇಳಿದ್ದಾರೆ.

“ದಿವಂಗತ ದೀಪಕ ಭಾಯ್ ಅವರ ಆಶೀರ್ವಾದವು ನಿಮ್ಮೊಂದಿಗಿದೆ ಎಂದು ನನಗೆ ಖಾತ್ರಿಯಿದೆ” ಎಂದು ಪ್ರಧಾನಿ ಅವರು ತಂದೆ ದೀಪಕ ಪಾಂಡ್ಯ ಅವರನ್ನು ಉಲ್ಲೇಖಿಸಿ ಹೇಳಿದ್ದಾರೆ. ದೀಪಕ ಅವರು ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತಿನವರು. ಮತ್ತು 2020 ರಲ್ಲಿ ಅಮೆರಿಕದಲ್ಲಿ ನಿಧನರಾದರು.
2016 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದಾಗ ಅವರನ್ನು ಭೇಟಿಯಾಗಿದ್ದನ್ನು “ಪ್ರೀತಿಯಿಂದ” ನೆನಪಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ನೀವು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ನೀವು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದೀರಿ. ಭಾರತದ ಜನರು ನಿಮ್ಮ ಉತ್ತಮ ಆರೋಗ್ಯ ಮತ್ತು ನಿಮ್ಮ ಕಾರ್ಯಾಚರಣೆಯ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ” ಎಂದುಹೇಳಿದ್ದಾರೆ.
“ನೀವು ಹಿಂದಿರುಗಿದ ನಂತರ, ನಿಮ್ಮನ್ನು ಭಾರತದಲ್ಲಿ ನೋಡಲು ನಾವು ಎದುರು ನೋಡುತ್ತಿದ್ದೇವೆ. ಭಾರತವು ತನ್ನ ಅತ್ಯಂತ ಪ್ರಸಿದ್ಧ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ಆತಿಥ್ಯ ವಹಿಸಲು ಸಂತೋಷವಾಗುತ್ತದೆ” ಎಂದು ಅವರು ಹೇಳಿದರು. ಅವರು ಸುನಿತಾ ಅವರ ಪತಿ ಮೈಕೆಲ್ ವಿಲಿಯಮ್ಸ್‌ಗೆ “ಹೃದಯಪೂರ್ವಕ ಶುಭಾಶಯಗಳನ್ನು” ಹೇಳಿದ್ದಾರೆ.
ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ 5 ರಂದು ಅಂತಾರಾಷ್ಟ್ರೀಯ ಬ್ಯಾಕಾಶ ನಿಲ್ದಾಣಕ್ಕೆ ಉಡಾವಣೆಯಾಗಿದ್ದರು. ಆದಾಗ್ಯೂ, ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ನಂತರ ಾವರು ಅಲ್ಲಿ ಒಂಬತ್ತು ತಿಂಗಳ ಕಾಲ ಸಿಕ್ಕಿಬಿದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement