
ಬೆಂಗಳೂರು: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಗಾಗ ತಗಾದೆ ಮಾಡುತ್ತಿರುವ ಮರಾಠಿ ಸಂಘಟನೆಗಳ ವಿರುದ್ಧ ಮಾರ್ಚ್ 22ರಂದು ಕರ್ನಾಟಕ ಬಂದ್ ಮಾಡುವ ಮೂಲಕ ಎಚ್ಚರಿಕೆ ನೀಡಲು ಕನ್ನಡ ಪರ ಸಂಘಟನೆಗಳು ಸಜ್ಜಾಗಿವೆ. ಆದರೆ ಬಂದ್ಗೆ ಸರ್ಕಾರ ಬೆಂಬಲ ನೀಡುವುದಿಲ್ಲ ಎಂದು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಮಾರ್ಚ್ 22ರ ಶನಿವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ರಾಜ್ಯಾದ್ಯಂತ ಬಂದ್ ಆಚರಿಸಲು ಉದ್ದೇಶಿಸಲಾಗಿದೆ. ಮತ್ತು ಈ ಬಂದ್ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ ನಾಗರಾಜ ಮನವಿ ಮಾಡಿದ್ದು, ಬಂದ್ ಸಂದರ್ಭದಲ್ಲಿ ಸಾರಿಗೆ ಸೇವೆಗಳಾದ ಬಸ್, ಆಟೋ, ಮತ್ತಿತರ ವಾಹನಗಳ ಸಂಚಾರ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಶನಿವಾರದ ಬಂದ್ಗೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಬೆಂಬಲ ಸೂಚಿಸಿದೆ. ಕರ್ನಾಟಕ ಸಾರಿಗೆ ನೌಕರರ ಒಕ್ಕೂಟ ಬಂದ್ಗೆ ಬೆಂಬಲ ನೀಡುವ ಭರವಸೆ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಸಂಘದಿಂದ ಕೂಡ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಓಲಾ, ಉಬರ್ ಅಸೋಸಿಯೋಷನ್, ಎಪಿಎಂಸಿ ಸೇರಿ ಕೆಲ ಸಂಘಟನೆಗಳು ಬಂದ್ಗೆ ಬೆಂಬಲ ನೀಡಲು ಮುಂದಾಗಿವೆ. ಹೊಟೇಲ್ ಮಾಲೀಕರ ಸಂಘ ನೈತಿಕ ಬೆಂಬಲ ಘೋಷಿಸಿದೆ.
ಬಂದ್ ಕಾರಣದಿಂದ ಸಿನಿಮಾ ಥಿಯೇಟರ್, ಚಲನಚಿತ್ರ ವಾಣಿಜ್ಯ ಮಂಡಳಿ, ಶಾಪಿಂಗ್ ಮಾಲ್ಗಳು, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ, ಬೀದಿಬದಿ ವ್ಯಾಪಾರಿಗಳಿಂದ ಬಂದ್ಗೆ ಭಾಗಶಃ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಈ ಸೇವೆ ಮೇಲೆ ಪರಿಣಾಮ ಬೀರಬಹುದಾಗಿದೆ. ಆಸ್ಪತ್ರೆ, ವೈದ್ಯಕೀಯ ಸೇವೆ, ಹಾಲು, ಅಗತ್ಯ ವಸ್ತುಗಳ ಮಾರಾಟ ಇರಲಿದೆ.
ಬೆಂಗಳೂರಿನಲ್ಲಿ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುವಂತಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅಗತ್ಯ ಪೂರ್ವ ಸಿದ್ಧತೆಗಳನ್ನ ಪೊಲೀಸ್ ಇಲಾಖೆ ಮಾಡಿಕೊಂಡಿದ್ದು, ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಮುಂದಾದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಗಳಾದರೆ ಸಂಘಟನೆಗಳೇ ಜವಾಬ್ದಾರಿ ಎಂದು ಹೇಳಿದ್ದಾರೆ.
ಏನಿರುತ್ತೆ?
ದೈನಂದಿನ ಅವಶ್ಯಕ ವಸ್ತುಗಳಾದ ಹಾಲು, ದಿನಪತ್ರಿಕೆ, ಮೆಡಿಕಲ್, ವೈದ್ಯಕೀಯ ಸೇವೆ ಇರಲಿದೆ
ಆಂಬುಲೆನ್ಸ್ , ಹೋಲ್ ಸೆಲ್ ಬಟ್ಟೆ ಅಂಗಡಿಗಳು ಇರಲಿವೆ
ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್, ಹೋಟೆಲ್ ಗಳು ಓಪನ್
ಬಿಎಂಟಿಸಿ-ಕೆಎಸ್ಆರ್ಟಿಸಿ, ಮೆಟ್ರೋ ರೈಲು ಸೇವೆಗೆ ತೊಂದರೆಯಾಗುವ ಸಾಧ್ಯತೆ ಕಡಿಮೆ
ಖಾಸಗಿ ಬಸ್, ಶಾಲಾ ವಾಹನ ಓಡಾಟ ಇರಲಿದೆ.
ಏರ್ ಪೋರ್ಟ್ ಟ್ಯಾಕ್ಸಿ ಸೇವೆ ಇರಲಿದೆ
ಕೆಲವಷ್ಟು ಆಟೋಗಳ ಸೇವೆ ಇರಲಿದೆ
ಏನಿರಲ್ಲ?
ಥಿಯೇಟರ್ ಗಳು ಮಧ್ಯಾಹ್ನ ತನಕ ಬಂದ್
ಆಟೋ ಸೇವೆಯಲ್ಲಿ ತುಸು ವ್ಯತ್ಯಯವಾಗಬಹುದು
ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಬಹುದು
ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
ಬೃಹತ್ ಪ್ರತಿಭಟನಾ ಮೆರವಣಿಗೆ: ಬಂದ್ ಗೆ ಕರೆ ನೀಡಿರುವ ಸಂಘಟಕರು ಟೌನ್ ಹಾಲ್ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಪೊಲೀಸ್ ನಿರ್ಬಂಧಗಳ ಹೊರತಾಗಿಯೂ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಾಟಾಳ ನಾಗರಾಜ ಹೇಳಿದ್ದಾರೆ.
ಪ್ರತಿಭಟನಾಕಾರರು ಹಲವು ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಅದ ಬೆಳಗಾವಿಯಲ್ಲಿ ಕರ್ನಾಟಕ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮೇಲೆ ನಿಷೇಧ ಹೇರಬೇಕು. ಕನ್ನಡ ಹಿತಾಸಕ್ತಿಗಳ ವಿರುದ್ಧ ಹಿಂಸಾಚಾರದಲ್ಲಿ ಭಾಗಿಯಾಗಿರುವ ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರನ್ನು ಗಡೀಪಾರು ಮಾಡಬೇಕು. ಕನ್ನಡದ ಕಂಡಕ್ಟರ್ ಮೇಲೆ ದಾಳಿ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಅವರ ಆಗ್ರಹವಾಗಿದೆ. ಅಲ್ಲದೆ ಉತ್ತರ ಕರ್ನಾಟಕ ಮತ್ತು ರಾಜ್ಯದ ಗಡಿ ಪ್ರದೇಶಗಳ ಒಟ್ಟಾರೆಯಾಗಿ ಸಮರ್ಪಕ ಅಭಿವೃದ್ಧಿ ಆಗಬೇಕು ಎಂಬುದು ಒತ್ತಾಯವಾಗಿದೆ.
ಕರ್ನಾಟಕದಲ್ಲಿ ಹಿಂದಿ ಹೇರಿಕೆಗೆ ವಿರೋಧ, ಮೆಟ್ರೋ ಪ್ರಯಾಣ ದರ ಏರಿಕೆ ಹಿಂಪಡೆಯಲು ಒತ್ತಾಯ, ಸ್ಥಳೀಯ ಕನ್ನಡಿಗ ಚಾಲಕರಿಗೆ ಕಂಪನಿಗಳಲ್ಲಿ ಉದ್ಯೋಗ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ