‘ನಗದು..ವಿಮಾನ..ಗುಡ್‌ ಬೈ..! ಅಕ್ರಮ ವಲಸಿಗರು ‘ಅಮೆರಿಕ ತೊರೆಯಲು’ ಸ್ಟೈಫಂಡ್, ವಿಮಾನ ಟಿಕೆಟಿಗೆ ಹಣದ ಆಫರ್‌ ನೀಡಿದ ಟ್ರಂಪ್‌…!

 ವಾಷಿಂಗ್ಟನ್‌ : ತಮ್ಮ ತೀವ್ರವಾದ ವಲಸೆ ನಿಗ್ರಹ ಕ್ರಮದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅಕ್ರಮ ವಲಸಿಗರನ್ನು ದೇಶದಿಂದ ಗಡೀಪಾರು ಮಾಡಲು ವಿಭಿನ್ನ ವಿಧಾನವನ್ನು ಅನುಸರಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿರುವ ದಾಖಲೆ ಇಲ್ಲದ ಜನರು ತಮ್ಮನ್ನು ತಾವೇ ಸ್ವಯಂ ಗಡೀಪಾರು ಮಾಡಿಕೊಳ್ಳುವುದನ್ನು ಉತ್ತೇಜಿಸಲು ಅವರಿಗೆ ಸ್ಟೈಪೆಂಡ್‌ನಿಂದ ಹಿಡಿದು ವಿಮಾನ ಟಿಕೆಟ್‌ಗಳ ವರೆಗೆ ಹಣಕಾಸಿನ ನೆರವನ್ನು ನೀಡಲು ಈಗ ಟ್ರಂಪ್‌ ಮುಂದಾಗಿದ್ದಾರೆ.
ಫಾಕ್ಸ್ ನೋಟಿಸಿಯಾಸ್‌ ಜೊತೆ ಮಾತನಾಡಿದ ಟ್ರಂಪ್, ಗಂಭೀರ ಅಪರಾಧ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ಗಡೀಪಾರು ಮಾಡಲು ಆದ್ಯತೆ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಹೇಳಿದ್ದಾರೆ. ಈ ಕ್ರಮವು “ಒಳ್ಳೆಯ” ವ್ಯಕ್ತಿಗಳು ಕಾನೂನುಬದ್ಧವಾಗಿ ಅಮೆರಿಕಕ್ಕೆ ಮತ್ತೆ ಮರಳಲು ಒಂದು ಮಾರ್ಗವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ.

ಸಂದರ್ಶನದಲ್ಲಿ ತಮ್ಮ ಯೋಜನೆ ಬಗ್ಗೆ ವಿವರಿಸಿದ ಡೊನಾಲ್ಡ್ ಟ್ರಂಪ್, “ನಾವು ಅವರಿಗೆ ಸ್ಟೈಪೆಂಡ್ ನೀಡಲಿದ್ದೇವೆ. ನಾವು ಅವರಿಗೆ ಸ್ವಲ್ಪ ಹಣ ಮತ್ತು ವಿಮಾನ ಟಿಕೆಟ್ ನೀಡಲಿದ್ದೇವೆ, ಮತ್ತು ನಂತರ ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ – ಅವರು ಒಳ್ಳೆಯವರಾಗಿದ್ದರೆ – ಅವರು ಮರಳಿ ಬರಲು ಬಯಸಿದರೆ, ಸಾಧ್ಯವಾದಷ್ಟು ಬೇಗ ಅವರನ್ನು ಮರಳಿ ಕರೆತರಲು ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ” ಎಂದು ಹೇಳಿದರು. ಅಮೆರಿಕ ಅಧ್ಯಕ್ಷರು ಇದರ ವಿವರಗಳು, ಅದರ ಅನುಷ್ಠಾನದ ಸಮಯ ಮತ್ತು ಅರ್ಹತೆಯ ಮಾನದಂಡಗಳನ್ನು ನಿರ್ದಿಷ್ಟಪಡಿಸಲಿಲ್ಲ.
ತಮ್ಮ ಹಿಂದಿನ ಕಠಿಣ ನಿಲುವಿನಿಂದ ಸ್ವಲ್ಪಮಟ್ಟಿಗೆ ಹಿಂದೆ ಸರಿದ ಟ್ರಂಪ್, ಪ್ರಸ್ತುತ “ಗಂಭೀರ ಅಪರಾಧ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳ ಗಡೀಪಾರು ಮಾಡುವುದರ ಮೇಲೆ ಗಮನ ಹರಿಸಲಾಗಿದೆ ಮತ್ತು ಈ ಕ್ರಮಗಳು ದೇಶದಲ್ಲಿ ಕಾನೂನು ಸ್ಥಾನಮಾನವಿಲ್ಲದವರು ಹಣಕಾಸಿನ ನೆರವಿನಿಂದ ತಾವಾಗಿಯೇ ಹೊರಹೋಗಲು ಪ್ರೋತ್ಸಾಹಿಸುತ್ತವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವ್ಲಾಗರ್, ವಿದ್ಯಾರ್ಥಿ, ಉದ್ಯಮಿ, ಗಾರ್ಡ್....: 9 ಮಂದಿ 'ಪಾಕಿಸ್ತಾನ ಗೂಢಚಾರರ' ಬಂಧನ

ಅಧಿಕಾರಿಗಳು ಅಂಥವರನ್ನು ಪತ್ತೆ ಮಾಡುವ ಮೊದಲು ಈ ವಲಸಿಗರು “ಸ್ವಯಂ-ಗಡೀಪಾರು” ಮಾಡಿಕೊಳ್ಳಬೇಕು ಎಂದು ಅಮೆರಿಕ ಆಡಳಿತವು ಈ ಹಿಂದೆ ಎಚ್ಚರಿಸಿತ್ತು. “ಅಕ್ರಮ ವಲಸಿಗರಿಗೆ ಸುರಕ್ಷಿತ ಆಯ್ಕೆಯೆಂದರೆ ಸ್ವಯಂ-ಗಡೀಪಾರು ಆಗುವುದು” ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವಕ್ತಾರರು ಏಪ್ರಿಲ್ 9 ರಂದು ಎಚ್ಚರಿಸಿದ್ದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಸ್ವಯಂ-ಗಡೀಪಾರು ಆಗುವವರು ನಂತರ ಕಾನೂನುಬದ್ಧವಾಗಿ ಅಮೆರಿಕಕ್ಕೆ ಹಿಂತಿರುಗಬಹುದು, ಆದರೆ ಬಲವಂತವಾಗಿ ಗಡೀಪಾರು ಮಾಡಿದವರನ್ನು ಶಾಶ್ವತವಾಗಿ ಅಮೆರಿಕಕ್ಕೆ ಬರುವುದನ್ನು ನಿರ್ಬಂಧಿಸಲಾಗುವುದು ಎಂದು ಆಡಳಿತವು ಹೇಳಿತ್ತು.
ಅಮೆರಿಕದಲ್ಲಿರುವ ಅಕ್ರಮ ವಲಸಿಗರು ಸ್ವಯಂ-ಗಡೀಪಾರು ಆಗಲು ಸಿಬಿಪಿ ಹೋಮ್ ಅಪ್ಲಿಕೇಶನ್ ಅನ್ನು ಬಳಸಲು ಕೇಳಲಾಗಿದೆ. “ಅವರು ಹಾಗೆ ಮಾಡದಿದ್ದರೆ, ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಕ್ರಮ ವಲಸಿಗರು ತಮ್ಮ ಅಂತಿಮ ಗಡೀಪಾರು ಆದೇಶವನ್ನು ಮೀರಿದರೆ ಪ್ರತಿ ದಿನಕ್ಕೆ $998 ದಂಡವನ್ನು ವಿಧಿಸುವುದು ಇದರಲ್ಲಿ ಸೇರಿದೆ” ಎಂದು ವಕ್ತಾರರು ಎಚ್ಚರಿಸಿದ್ದಾರೆ ಹಾಗೂ ಸಂಭವನೀಯ ಜೈಲು ಶಿಕ್ಷೆಯ ಬಗ್ಗೆಯೂ ಸುಳಿವು ನೀಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement