ಬೆಂಗಳೂರು : ಭಾನುವಾರ ಬೆಂಗಳೂರಿನ ಎಚ್‌ಎಸ್ ಆರ್ ಲೇಔಟ್‌ನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಕರ್ನಾಟಕದ ಮಾಜಿ ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ, ಅಂದು ಮಧ್ಯಾಹ್ನ ತಮ್ಮ ಪತ್ನಿಯೊಂದಿಗೆ ಜಗಳವಾಡಿದ್ದರು. ಅದು ವಿಕೋಪಕ್ಕೆ ಹೋಗಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಜಗಳದಲ್ಲಿ, ಅವರು ಓಂ ಪ್ರಕಾಶ ಅವರ ಮೇಲೆ ಮೆಣಸಿನ ಪುಡಿ ಎಸೆದು, ಕಟ್ಟಿಹಾಕಿ, ನಂತರ ಇರಿದು ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕೊಲೆಯ ನಂತರ, ನಿವೃತ್ತ ಅಧಿಕಾರಿಯ ಪತ್ನಿ ಮತ್ತೊಬ್ಬ ಪೊಲೀಸ್ ಅಧಿಕಾರಿಯ ಪತ್ನಿಯೊಂದಿಗೆ ಮಾತನಾಡಿ, ತನ್ನ ಪತಿಯನ್ನು ಕೊಂದಿರುವುದಾಗಿ ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಪೊಲೀಸರು ಅಪರಾಧ ಸ್ಥಳಕ್ಕೆ ಧಾವಿಸಿ ಓಂ ಪ್ರಕಾಶ ಅವರ ಪತ್ನಿ ಮತ್ತು ಅವರ ಮಗಳನ್ನು ವಶಕ್ಕೆ ಪಡೆದಿದ್ದಾರೆ. ತಾಯಿ ಮತ್ತು ಮಗಳನ್ನು ಈಗ ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಓಂ ಪ್ರಕಾಶ ಅವರನ್ನು ಪತ್ನಿ ಪಲ್ಲವಿ 8 ರಿಂದ10 ಬಾರಿ ಚಾಕುವಿನಿಂದ ಇರಿದಿದ್ದಾಳೆ. ಚಾಕು ಇರಿತದಿಂದ ಓಂ ಪ್ರಕಾಶ ಅವರ ಎದೆ, ಹೊಟ್ಟೆ ಹಾಗೂ ಕೈ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಹೊಟ್ಟೆ ಭಾಗಕ್ಕೆ ಸುಮಾರು ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ, ಮಾಜಿ ಪೊಲೀಸ್ ಮುಖ್ಯಸ್ಥರ ಆಘಾತಕಾರಿ ಹತ್ಯೆಯಲ್ಲಿ ಪತ್ನಿ ಪ್ರಮುಖ ಶಂಕಿತರಾಗಿದ್ದಾರೆ. ಓಂ ಪ್ರಕಾಶ ಅವರ ದೇಹದ ಹೊಟ್ಟೆ ಮತ್ತು ಎದೆಯ ಮೇಲೆ ಅನೇಕ ಇರಿತದ ಗಾಯಗಳಿವೆ.
ವರದಿಗಳ ಪ್ರಕಾರ, ಓಂ ಪ್ರಕಾಶ ಮತ್ತು ಅವರ ಪತ್ನಿ ಸಂಬಂಧಿಗೆ ವರ್ಗಾಯಿಸಿದ ಆಸ್ತಿಯ ಬಗ್ಗೆ ಜಗಳವಾಡಿದ್ದರು. ಈ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಅವರನ್ನು ಇರಿದು ಕೊಂದಿದ್ದಾಳೆ ಎಂದು ಶಂಕಿಸಲಾಗಿದೆ. ಕೊಲೆಯಲ್ಲಿ ಅವರ ಮಗಳ ಪಾತ್ರವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಓಂ ಪ್ರಕಾಶ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸಕುಮಾರ ಅವರು ನಿವೃತ್ತ ಅಧಿಕಾರಿಯ ಸಾವಿನ ಬಗ್ಗೆ ಬೆಳಿಗ್ಗೆ 4 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು ಎಂದು ಹೇಳಿದರು.
ಓಂ ಪ್ರಕಾಶ 1981 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಾಗಿದ್ದರು. ಅವರನ್ನು ಮಾರ್ಚ್ 2015 ರಲ್ಲಿ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಿಸಲಾಯಿತು. ಅದಕ್ಕೂ ಮೊದಲು, ಅವರು ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಗೃಹರಕ್ಷಕ ದಳದ ಮುಖ್ಯಸ್ಥರೂ ಆಗಿದ್ದರು.
ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು, “ನಿವೃತ್ತ ಪೊಲೀಸ್ ಮಹಾನಿರ್ದೇಶಕ ಆನ್ ಪ್ರಕಾಶ್ ಅವರನ್ನು ಕೊಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರ ಪತ್ನಿ ಮೇಲೆ ಶಂಕೆ ಇದೆ, ಅದು ತನಿಖೆಯಲ್ಲಿದೆ. ನಾವು ಕಾಯಬೇಕಾಗಿದೆ. ನಾನು 2015 ರಲ್ಲಿ ಗೃಹ ಸಚಿವನಾಗಿದ್ದಾಗ ಅವರು ನನ್ನೊಂದಿಗೆ ಕೆಲಸ ಮಾಡಿದರು, ಅವರು ಉತ್ತಮ ಅಧಿಕಾರಿ ಮತ್ತು ಒಳ್ಳೆಯ ಮನುಷ್ಯ. ಇದು ಸಂಭವಿಸಬಾರದಿತ್ತು. ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳುತ್ತದೆ” ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ