ಕಾರವಾರ | ತಲೆಮರೆಸಿಕೊಂಡಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಮುಖ ಆರೋಪಿ ಬಂಧನ

ಕಾರವಾರ: 2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ (KG Halli-DJ Halli) ಗಲಭೆ ಪ್ರಕರಣದ ಮೋಸ್ಟ್ ವಾಂಟೆಡ್ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಆರೋಪಿ ಮೌಸೀನ್ ಪಿಎಫ್‌ಐ (PFI) ಕಾರ್ಯಕರ್ತನಾಗಿದ್ದ ಹಾಗೂ ಕೆಜಿ ಹಳ್ಳಿ-ಡಿಜಿ ಹಳ್ಳಿ ಗಲಭೆ ನಂತರ ತಲೆಮರೆಸಿಕೊಂಡಿದ್ದ . ಮೌಸೀನ್​ ಮೊದಲು ಹೈದರಾಬಾದ್‌ಗೆ ತೆರಳಿ, ನಂತರ ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ನೆಲೆಸಿದ್ದನು.
ಈತನ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣ ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.‌ನಾರಾಯಣ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆಗೆ ನಡೆಸಿ ಸಿಂಧಗಿಗೆ ತೆರಳಿ ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆ ಉಗ್ರ ಚಟುವಟಿಕೆ ಸಂಬಂಧಿಸಿ ಶಿರಸಿಯಲ್ಲಿ ಎನ್​ಐಎಯಿಂದ ಬಂಧಿತನಾಗಿದ್ದ ಸಾದಿಕ್​, ಆರೋಪಿ ಮೌಸೀನ್​ ಗೆ ತರಬೇತಿ ನೀಡಿದ್ದ ಎನ್ನಲಾಗಿದೆ. ಶಿರಸಿಯಲ್ಲಿ ಸೆಕ್ಷನ್‌ 302 ಪ್ರಕರಣಗಳ ಆರೋಪಿಯಾದ ಈತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
2020ರ ಆಗಸ್ಟ್‌ನಲ್ಲಿ ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ನಡೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಪೋಸ್ಟ್‌ನಿಂದಾಗಿ ಉಂಟಾದ ಈ ಗಲಭೆಯಲ್ಲಿ ಪೊಲೀಸ್ ಠಾಣೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಅಂದಿನ ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಮೌಸೀನ್ ಶುಕುರ್ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ.

ಪ್ರಮುಖ ಸುದ್ದಿ :-   ವಾಯುಭಾರ ಕುಸಿತ : ಕರ್ನಾಟಕದಲ್ಲಿ ಮೇ 24ರ ವರೆಗೆ ಭಾರಿ ಮಳೆ ಮುನ್ನೆಚ್ಚರಿಕೆ ; 15 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement