ಮಂಗಳೂರು: ನಗರದಲ್ಲಿ ಗುರುವಾರ ರಾತ್ರಿ ರೌಡಿಶೀಟರ್ ಬರ್ಬರ ಹತ್ಯೆ ನಡೆದಿದೆ. ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ ಶೆಟ್ಟಿ (Suhas Shetty) ಕೊಲೆಯಾದ ವ್ಯಕ್ತಿ.
ಮಂಗಳೂರಿನ ಬಜಪೆ ಕಿನ್ನಿಪದವು ಬಳಿ ಘಟನೆ ನಡೆದಿದ್ದು, ದುಷ್ಕರ್ಮಿಗಳು ತಲ್ವಾರ್ಗಳಿಂದ ಹಲ್ಲೆ ನಡೆಸಿದ್ದರಿಂದ ಸುಹಾಸ್ ಶೆಟ್ಟಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದಲ್ಲಿದ್ದು ಗೋರಕ್ಷಣೆ ವಿಷಯದಲ್ಲಿ ಸಕ್ರಿಯನಾಗಿದ್ದ ಎಂದು ಹೇಳಲಾಗಿದೆ. 2022ರಲ್ಲಿ ನಡೆದಿದ್ದ ಫಾಜಿಲ್ ಕೊಲೆಗೆ ಪ್ರತೀಕಾರವಾಗಿ ಇವರ ಹತ್ಯೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಎ.ಜೆ.ಆಸ್ಪತ್ರೆ ಎದುರು ನೂರಾರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು 2022ರಲ್ಲಿ ಜುಲೈ 26ರಂದು ರಾತ್ರಿ ಬೈಕಿನಲ್ಲಿ ಬಂದ ಇನ್ನೊಂದು ಕೋಮಿಗೆ ಸೇರಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೈಗೈದಿದ್ದರು. ಪ್ರವೀಣ ಹತ್ಯೆಗೆ ಪ್ರತೀಕಾರವಾಗಿ 2022ರಲ್ಲಿ ಸುರತ್ಕಲ್ನ ಫಾಜಿಲ್ ಎಂಬವರ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಬಜ್ಪೆ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಸುಹಾಸ್ ಶೆಟ್ಟಿ ಸಹ ಈ ಹತ್ಯೆಯ ಸೂತ್ರಧಾರಿಗಳಲ್ಲಿ ಒಬ್ಬ ಎಂಬ ಆರೋಪವಿದೆ. ಹಲವು ಕೊಲೆ, ಕೊಲೆಯತ್ನ ಪ್ರಕರಣದ ಆರೋಪಿಯಾಗಿದ್ದ ಈತ, ಫಾಜಿಲ್ ಹತ್ಯೆ ಪ್ರಕರಣದಲ್ಲಿ ಜಾಮೀನಿನ ಮೇರೆಗೆ ಜೈಲಿನಿಂದ ಹೊರಗೆ ಬಂದಿದ್ದ.
ಗುರುವಾರ ಮೀನು ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಸ್ವಿಫ್ಟ್ ಕಾರು ಮತ್ತು ಪಿಕಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಗಳ ಗುಂಪು ತಡೆದಿದೆ. ನಂತರ ಆತನ ಮೇಲೆ ತಲವಾರ್ನಿಂದ ಹಲ್ಲೆ ನಡೆಸಿದ ಪರಾರಿಯಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿತ್ತು. ಆದರೆ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಪ್ರತೀಕಾರದ ಹತ್ಯೆ ಸೇರಿದಂತೆ ವಿವಿಧ ಕೋನಗಳಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಆದಷ್ಟು ಬೇಗನೆ ಬಂಧಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ. ಘಟನೆ ಕುರಿತು ತನಿಖೆ ಮುಂದುವರೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ