ಮಂಗಳೂರು : ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಒಂದು ದಿನ ಬಂದ್ ಗೆ ಕರೆ ಕೊಟ್ಟಿದೆ.
ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿದ್ದು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿವೆ. ಅದೇ ರೀತಿ, ಖಾಸಗಿ ಬಸ್ ಸಂಚಾರ ಕೂಡ ಸ್ಥಗಿತಗೊಳ್ಳಲಿದೆ. ಎಲ್ಲಾ ವ್ಯಾಪಾರ, ವಹಿವಾಟು, ವಾಹನ ಸಂಚಾರ ಬಂದ್ ಮಾಡಲು ಕರೆ ನೀಡಲಾಗಿದೆ.
ಸುಹಾಸ್ ಶೆಟ್ಟಿ ಮತ್ತು ಐವರು ಸಹಚರರು ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ಅಡ್ಡಗಟ್ಟಿ ಹತ್ಯೆ ಮಾಡಲಾಗಿದೆ. ಇದೊಂದು ಪೂರ್ವ ಯೋಜಿತ ಹತ್ಯೆ, ಇದರ ಹಿಂದೆ ನಿಷೇಧಿತ ಪಿಎಫ್ಐ ಕೈವಾಡ ಇದೆ. ಹೀಗಾಗಿ ಬಂದ್‌ಗೆ ಕರೆ ನೀಡಿದ್ದೇವೆ. ಪೊಲೀಸ್ ಇಲಾಖೆ ವೈಫಲ್ಯದ ವಿರುದ್ದ ನಾವು ಹೋರಾಡುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಂಚಾಲಕ ಶರಣ ಪಂಪ್‌ವೆಲ್ ತಿಳಿಸಿದ್ದಾರೆ. ನಡುರಾತ್ರಿ ವೇಳೆಗೆ ಎಜೆ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್‌ಗೆ ಕರೆ ನೀಡಿದ್ದಾರೆ.
ಮೇ 2ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್ ಮಾಡಲಾಗುವುದು. ಕೊಲೆ ಕೃತ್ಯ ಎಸಗಿದ ಆರೋಪಿಗಳನ್ನು ಪೊಲೀಸರು ಬಂಧಿಸಬೇಕೆಂದು ಅವರು ಆಗ್ರಹಿಸಿದರು.
ಮಂಗಳೂರಿನಲ್ಲಿ ನಿಷೇಧಾಜ್ಞೆ
ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಎನ್ಎಸ್ ಕಲಂ 163 ಅಡಿಯಲ್ಲಿ ಮೇ 2 ರ ಮುಂಜಾನೆ 6 ಗಂಟೆಯಿಂದ ಮೇ 6 ರ ಮುಂಜಾನೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಆದೇಶದಲ್ಲಿ ತಿಳಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ