ನವದೆಹಲಿ: ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಗೆ ಪ್ರತಿಯಾಗಿ ಆರಂಭಿಸಲಾದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಯಲ್ಲಿ ಪಾಕಿಸ್ತಾನದ ಮಿರಾಜ್ ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಭಾರತ ಸೋಮವಾರ ತಿಳಿಸಿದೆ. ಭಾರತೀಯ ಸೇನೆಯು X ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಪಾಕಿಸ್ತಾನದ ಮಿರಾಜ್ ಜೆಟ್‌ನ ತುಂಡಾಗಿ ಬಿದ್ದಿರುವ ಅವಶೇಷಗಳು ಕಂಡುಬಂದಿವೆ.
ಪಾಕಿಸ್ತಾನದ ಮಿರಾಜ್ ಜೆಟ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಈ ಬ್ರೀಫಿಂಗ್‌ಗೆ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ಲೆಫ್ಟಿನೆಂಟ್ ಜನರಲ್ ರಾಜೀವ ಘಾಯ್, ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ವೈಸ್ ಮಾರ್ಷಲ್ ಎಕೆ ಭಾರ್ತಿ ಮತ್ತು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ್ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಎರಡೂ ದೇಶಗಳ ನಡುವಿನ ದಿನಗಟ್ಟಲೆ ನಡೆದ ಮಿಲಿಟರಿ ಸಂಘರ್ಷದ ಪ್ರಮುಖ ಅಂಶವೆಂದರೆ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ ವಾಯು ರಕ್ಷಣಾ ವ್ಯವಸ್ಥೆ ಎಂದು ಏರ್ ವೈಸ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು.
“ನಮ್ಮ ಯುದ್ಧ-ವ್ಯವಸ್ಥೆಗಳು ಸಂಘರ್ಷ ಕಾಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿವೆ. ಮತ್ತೊಂದು ಪ್ರಮುಖ ಅಂಶವೆಂದರೆ ಸ್ಥಳೀಯ ವಾಯು ರಕ್ಷಣಾ ವ್ಯವಸ್ಥೆಯಾದ ಆಕಾಶ ವ್ಯವಸ್ಥೆಯ ಅದ್ಭುತ ಕಾರ್ಯಕ್ಷಮತೆ. ಕಳೆದ ದಶಕದಲ್ಲಿ ಭಾರತ ಸರ್ಕಾರದ ಬಜೆಟ್ ಮತ್ತು ನೀತಿ ಬೆಂಬಲದಿಂದಾಗಿ ಪ್ರಬಲವಾದ ವಾಯು ರಕ್ಷಣಾ ವ್ಯವಸ್ಥೆ (AD)ಯನ್ನು ಕಾರ್ಯಗತಗೊಳಿಸುವುದು ಸಾಧ್ಯವಾಗಿದೆ” ಎಂದು ಅವರು ಹೇಳಿದರು.
ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಆಕಾಶ ಹೆಸರಿನ ಸಾಫ್ಟ್ ಮತ್ತು ಹಾರ್ಡ್ ಕಿಲ್ ಕೌಂಟರ್-ಯುಎಎಸ್ ವ್ಯವಸ್ಥೆಗಳು ಮತ್ತು ಸುಶಿಕ್ಷಿತ ಭಾರತೀಯ ವಾಯು ರಕ್ಷಣಾ ಸಿಬ್ಬಂದಿಯಿಂದ ಪಾಕಿಸ್ತಾನ ಬಳಸುತ್ತಿದ್ದ ಹಲವಾರು ಡ್ರೋನ್‌ಗಳು ಮತ್ತು ಮಾನವರಹಿತ ಯುದ್ಧ ವೈಮಾನಿಕ ವಾಹನಗಳನ್ನು ಸಹ ವಿಫಲಗೊಳಿಸಲಾಯಿತು” ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಹೇಳಿದರು.
ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಆಪರೇಷನ್ ಸಿಂಧೂರ ಪ್ರಾರಂಭವಾದ ನಂತರ ಇದು ಅವರ ಮೊದಲ ಭಾಷಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಮೇ 7 ರ ಬೆಳಗಿನ ಜಾವ ಆಪರೇಷನ್ ಸಿಂಧೂರ ಪ್ರಾರಂಭಿಸಿತು ಮತ್ತು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಿತು. ಇಡೀ ಕಾರ್ಯಾಚರಣೆ ಕೇವಲ 25 ನಿಮಿಷಗಳ ಕಾಲ ನಡೆಯಿತು.
ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಮತ್ತು ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್-ಮುಜಾಹಿದ್ದೀನ್ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಾರತದ ದಾಳಿಯ ನಂತರ, ಪಾಕಿಸ್ತಾನವು ಪರಿಸ್ಥಿತಿಯನ್ನು ಉಲ್ಬಣಗೊಳಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದಾದ್ಯಂತ ಭಾರತೀಯ ಮಿಲಿಟರಿ ಸೌಲಭ್ಯಗಳು ಮತ್ತು ಗಡಿ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳ ದಾಳಿಯನ್ನು ನಡೆಸಿತು. ಈ ದಾಳಿಗಳನ್ನು ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಿತು ಮತ್ತು ಅಮೃತಸರ, ಜಮ್ಮು, ಜೈಸಲ್ಮೇರ್ ಮತ್ತು ಪಠಾಣ್‌ಕೋಟ್ ಸೇರಿದಂತೆ ಹಲವಾರು ನಗರಗಳಲ್ಲಿ ವಾಯು ಸೈರನ್‌ಗಳು ಮತ್ತು ವಿದ್ಯುತ್ ಕಡಿತಕ್ಕೆ ಕಾರಣವಾಯಿತು.
ಭಾರತೀಯ ಸಶಸ್ತ್ರ ಪಡೆಗಳು ರಫೀಕಿ, ಮುರಿಯ್, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿದವು. ಪಸ್ರೂರ್ ಮತ್ತು ಸಿಯಾಲ್‌ಕೋಟ್ ವಾಯುಯಾನ ನೆಲೆಗಳಲ್ಲಿನ ರಾಡಾರ್ ತಾಣಗಳನ್ನು ಸಹ ನಿಖರವಾದ ದಾಳಿ ಮೂಲಕ ನಾಶಗೊಳಿಸಲಾಯಿತು. ಇದರಿಂದಾಗಿ ಪಾಕಿಸ್ತಾನದ ಸೇನಾ ವ್ಯವಸ್ಥೆಗೆ ಭಾರಿ ಹಾನಿಯಾಯಿತು. ಈ ಯುದ್ಧದಲ್ಲಿ 35-40 ಪಾಕಿಸ್ತಾನಿ ಸೈನಿಕರು ಸಾವಿಗೀಡಾದರು ಮತ್ತು ಭಾರತ ತನ್ನ ಅಪೇಕ್ಷಿತ ಗುರಿಗಳನ್ನು ಸಾಧಿಸಿದೆ ಎಂದು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ ಘಾಯ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಶನಿವಾರ ಸಂಜೆ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ, ಭಾನುವಾರ ಮತ್ತು ಸೋಮವಾರದ ಮಧ್ಯದ ರಾತ್ರಿಗಳು ಜಮ್ಮು ಮತ್ತು ಕಾಶ್ಮೀರ ಮತ್ತು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಇತರ ಪ್ರದೇಶಗಳಲ್ಲಿ ಹೆಚ್ಚಾಗಿ ಶಾಂತಿಯುತವಾಗಿದ್ದವು ಎಂದು ಸೇನೆ ತಿಳಿಸಿದೆ. ಯಾವುದೇ ಶೆಲ್ ದಾಳಿ ಮತ್ತು ಗುಂಡಿನ ದಾಳಿಯ ಘಟನೆಗಳು ವರದಿಯಾಗಿಲ್ಲ, ಇದು 19 ದಿನಗಳಲ್ಲಿ ಮೊದಲ ಶಾಂತ ರಾತ್ರಿಯನ್ನು ಸೂಚಿಸುತ್ತದೆ.
“
ನಿಮ್ಮ ಕಾಮೆಂಟ್ ಬರೆಯಿರಿ