ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Attack) ನಂಥರ ಪಾಕಿಸ್ತಾನಕ್ಕೆ ಬೆಂಬಲ ನೀಡಿರುವ ಟರ್ಕಿಗೆ ಭಾರತ ದೊಡ್ಡ ಹೊಡೆತ ನೀಡಿದೆ. ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಯನ್ನು ನೀಡುತ್ತಿದ್ದ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್ ಇಂಡಿಯಾ ಸರ್ವೀಸ್ (Celebi Airport Services India) ಕಂಪನಿಗೆ ಕೊಟ್ಟಿದ್ದ ಅನುಮೋದನೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.
ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್ ಇಂಡಿಯಾ ಸರ್ವೀಸ್ ಮುಂಬಯಿ, ಬೆಂಗಳೂರು, ದಿಲ್ಲಿ, ಗೋವಾ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಕೊಚ್ಚಿ, ಚೆನ್ನೈ, ಕಣ್ಣೂರು ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆ ನೀಡುತ್ತಿತ್ತು. ಈಗ ಸರ್ಕಾರ ಸೆಲೆಬಿ ಕಂಪನಿಯ ಭದ್ರತಾ ಅನುಮತಿಯನ್ನು ರದ್ದುಗೊಳಿಸಿದೆ. ಕಂಪನಿಯು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡುವುದು, ಸಾಮಾನುಗಳನ್ನು ನೋಡಿಕೊಳ್ಳುವುದು ಮತ್ತು ವಿಮಾನಗಳನ್ನು ನಿರ್ವಹಿಸಲು ಸಹಾಯ ಮಾಡುವಂತಹ ಕೆಲಸಗಳನ್ನು ನಿರ್ವಹಿಸುತ್ತಿತ್ತು.
ಮುಂಬೈ ವಿಮಾನ ನಿಲ್ದಾಣದ ನೆಲದ ಕಾರ್ಯಾಚರಣೆಗಳಲ್ಲಿ ಸುಮಾರು ಶೇಕಡ 70ರಷ್ಟನ್ನು ಸೆಲೆಬಿ ಕಂಪನಿ ನಿರ್ವಹಿಸುತ್ತದೆ. ಇದರಲ್ಲಿ ಪ್ರಯಾಣಿಕರ ಸೇವೆ, ಹೊರೆ ನಿಯಂತ್ರಣ, ವಿಮಾನ ಕಾರ್ಯಾಚರಣೆಗಳು, ಸರಕು ಮತ್ತು ಅಂಚೆ ಸೇವೆ, ಗೋದಾಮು ಮತ್ತು ಸೇತುವೆ ಕಾರ್ಯಾಚರಣೆಗಳು ಸೇರಿವೆ. ‘ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಗ್ರೌಂಡ್ ಹ್ಯಾಂಡ್ಲಿಂಗ್ ಏಜೆನ್ಸಿಯಾಗಿ ಡಿಜಿ, ಬಿಸಿಎಎಸ್ ಅವರು 2022ರ ನವೆಂಬರ್ 21ರಂದು ಭದ್ರತಾ ಅನುಮತಿ ನೀಡಿದ್ದಾರೆ’ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಈಗ ಡಿಜಿ, ಬಿಸಿಎಎಸ್ ಅವರಿಗೆ ಇರುವ ಅಧಿಕಾರವನ್ನು ಬಳಸಿಕೊಂಡು, ಸೆಲೆಬಿ ಏರ್‌ಪೋರ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಭದ್ರತಾ ಅನುಮತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಸೆಲೆಬಿ ಕಂಪನಿಯು ಹತ್ತು ವರ್ಷಗಳ ಹಿಂದೆ ಮುಂಬಯಿ ಇಂಟರ್ ನ್ಯಾಶನಲ್ ಏರ್ ಪೋರ್ಟ್ ಸಹಭಾಗಿತ್ವದಲ್ಲಿ ಭಾರತೀಯ ವೈಮಾನಿಕ ಕ್ಷೇತ್ರವನ್ನು ಪ್ರವೇಶಿಸಿತ್ತು. ಸೆಲೆಬಿ ವರ್ಷಕ್ಕೆ 58,000ಕ್ಕೂ ಹೆಚ್ಚು ವಿಮಾನ ಟ್ರಿಪ್‌ಗಳನ್ನು ಮತ್ತು 5,40,000 ಟನ್ ಸರಕು ಸಾಗಣೆಯನ್ನು ನಿರ್ವಹಿಸಿತ್ತು. ಟರ್ಕಿಯ ಅಧ್ಯಕ್ಷ ಎರ್ಡೊಗನ್ ಬಹಿರಂಗವಾಗಿಯೇ ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ. ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ಭಾರತೀಯರು ಟರ್ಕಿಯೆ ಮತ್ತು ಅಜೆರ್ಬೈಜಾನ್ ಅನ್ನು ಬಹಿಷ್ಕರಿಸಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಈಗ ಸರ್ಕಾರ ಕೂಡ ಈ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಭಾರತ ಮತ್ತು ಟರ್ಕಿ ನಡುವಿನ ಸಂಬಂಧವನ್ನು ಹದಗೆಡಿಸಿದೆ.
ಶೈಕ್ಷಣಿಕ ಒಪ್ಪಂದವೂ ರದ್ದು
ಟರ್ಕಿಶ್ ಸಂಸ್ಥೆಗಳೊಂದಿಗಿನ ಎಲ್ಲ ರೀತಿಯ ಶೈಕ್ಷಣಿಕ ಸಂಬಂಧವನ್ನು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ರದ್ದುಪಡಿಸಿದೆ. ಟರ್ಕಿಯ ಜಾಗತಿಕ ನಿಲುವಿನ ವಿರುದ್ಧ ಇತ್ತೀಚೆಗೆ ಉಂಟಾದ ಉದ್ವಿಗ್ನತೆ ಮತ್ತು ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾಮಿಯಾ ವಿವಿ ಹೊರಡಿಸಿದ ನೋಟಿಸ್‌ನಲ್ಲಿ “ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಟರ್ಕಿಯ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಯಾವುದೇ ಸಂಸ್ಥೆಯ ನಡುವಿನ ತಿಳುವಳಿಕೆ ಒಪ್ಪಂದವನ್ನು (MoU) ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ” ಎಂದು ಹೇಳಿದೆ. ವಿಶ್ವವಿದ್ಯಾನಿಲಯವು “ರಾಷ್ಟ್ರದೊಂದಿಗೆ ದೃಢವಾಗಿ ನಿಲ್ಲುತ್ತದೆ” ಎಂದು ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ