ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಅಮೀರ್ ನಜೀರ್ ವಾನಿ ಮತ್ತು ಆತನ ತಾಯಿಯ ನಡುವಿನ ಮಾತುಕತೆಯನ್ನು ತೋರಿಸುವ ವೀಡಿಯೊ ಕ್ಲಿಪ್ ಹೊರಬಿದ್ದಿದೆ. ಮಾತುಕತೆಯ ಸಮಯದಲ್ಲಿ ತಾಯಿ ತನ್ನ ಮಗನಿಗೆ ಭದ್ರತಾ ಪಡೆಗಳಿಗೆ ಶರಣಾಗುವಂತೆ ಬೇಡಿಕೊಂಡಿದ್ದಾಳೆ.
ಗುರುವಾರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ವಾನಿ ಹತನಾಗುವ ಸ್ವಲ್ಪ ಸಮಯದ ಮೊದಲು ವೀಡಿಯೊ ಕರೆ ಮೂಲಕ ತಾಯಿ ಜೊತೆ ಮಾತನಾಡಿದ್ದಾನೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಭಯೋತ್ಪಾದಕ ವಾನಿ ತನ್ನ ತಾಯಿಯೊಂದಿಗೆ ಮಾತನಾಡುತ್ತಿರುವಾಗ ಎಕೆ -47 ಗನ್ ಹಿಡಿದುಕೊಂಡಿರುವುದು ಕಂಡುಬರುತ್ತದೆ. ಅದು ಆತನ ಕೊನೆಯ ಮಾತುಕತೆಯಾಗಿತ್ತು.
“ದಯವಿಟ್ಟು ಶರಣಾಗು” ಎಂದು ಅವನ ತಾಯಿ ಬೇಡಿಕೊಳ್ಳುತ್ತಿರುವುದು ಕೇಳಿಸುತ್ತದೆ, ಆದರೆ ವಾನಿ ನಿರಾಕರಿಸಿ, “ಸೈನ್ಯ ಮುಂದೆ ಬರಲಿ, ನಂತರ ನಾನು ನೋಡಿಕೊಳ್ಳುತ್ತೇನೆ” ಎಂದು ಉತ್ತರಿಸಿದ್ದಾನೆ.
ಭದ್ರತಾ ಪಡೆಗಳ ಜೊತೆ ಗುಂಡಿನ ಚಕಮಕಿ ಆರಂಭವಾಗುವ ಮುನ್ನ ವಾನಿ ಅಡಗಿಕೊಂಡಿದ್ದ ಮನೆಯಿಂದ ವೀಡಿಯೊ ಕರೆ ಮಾಡಲಾಗಿತ್ತು. ಆತನ ತಾಯಿಯಲ್ಲದೆ, ವಾನಿಯ ಸಹೋದರಿ ಕೂಡ ಆತನೊಂದಿಗೆ ಮಾತನಾಡಿದ್ದಾಳೆ. ಕರೆಯ ಸಮಯದಲ್ಲಿ, ಆತ ಅದೇ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮತ್ತೊಬ್ಬ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್ ಎಂಬಾತನ ಸಹೋದರಿಯೊಂದಿಗೂ ಮಾತನಾಡಿದ್ದಾನೆ.
ಪುಲ್ವಾಮಾ ಎನ್ಕೌಂಟರ್
ಪುಲ್ವಾಮಾದ ಟ್ರಾಲ್‌ನ ನಾಡರ್ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ನಡೆದ ಎನ್ಕೌಂಟರಿನಲ್ಲಿ ಮೂವರು ಜೆಇಎಂ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಉಗ್ರರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದವರು ಎಂದು ಮೂಲಗಳು ತಿಳಿಸಿವೆ.
ಎನ್‌ಕೌಂಟರ್ ನಂತರ, ಹತ್ಯೆಗೀಡಾದ ಭಯೋತ್ಪಾದಕರು ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿ.ಕೆ. ಬರ್ಡಿ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ