ಬಾಗಲಕೋಟೆ : ತಾಳಿ ಕಟ್ಟಿದ 15- 20 ನಿಮಿಷದಲ್ಲಿ ವರ (Groom) ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ತಾಳಿಕಟ್ಟಿ ಅಕ್ಷತೆ ಬಿದ್ದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮದುಮಗ ಕುಸಿದುಬಿದ್ದಿದ್ದಾರೆ. ಇದೆಲ್ಲವೂ ಎರಡೂ ಕುಟುಂಬಗಳು ಹಾಗೂ ಆಪ್ತರ ಸಮ್ಮುಖದಲ್ಲೇ ನಡೆದಿದೆ. ಖುಷಿಯಿಂದ ಮದುಮಗಳನ್ನು ಕಲ್ಯಾಣ ಮಂಟಪದಿಂದ ಮನೆಗೆ ಕರೆದುಕೊಂಡು ಹೋಗಬೇಕು ಎಂಬ ಇಚ್ಛೆಯಲ್ಲಿದ್ದ ವರನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.
ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿ ಪ್ರವೀಣ (25) ಮೃತ ದುರ್ದೈವಿ ಎಂದು ಹೇಳಲಾಗಿದೆ. ಇಂದು, ಶನಿವಾರ ಅವರ ವಿವಾಹ ನಿಗದಿಯಾಗಿತ್ತು. ಆದರೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಇದ್ದಕ್ಕಿದ್ದಂತೆ ಮದುಮಗನಿಗೆ ಎದೆನೋವು ಕಾಣಿಸಿಕೊಂಡಿತು. ಅಲ್ಲಿಯೇ ಕುಸಿದುಬಿದ್ದಿದ್ದಾರೆ ಎಂದು ಹೇಳಲಾಗಿದೆ. ಕುಸಿದು ಬಿದ್ದ ಬಳಿಕ ಮಾತನಾಡದೆ ಇರುವುದನ್ನ ಗಮನಿಸಿ ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿ ಪ್ರವೀಣ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ವಧು ಹಾಗೂ ಪೋಷಕರ ಆಕ್ರಂದನ ಮುಗಿಲು ಮುಗಿಲುಮುಟ್ಟಿದೆ. ಮದುವೆಗೆ ಬಂದ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ