ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರೈಲ್ವೆ ಹಳಿಯ ಮೇಲೆ ಉತ್ತರ ಪ್ರದೇಶದ 34 ವರ್ಷದ ಮಹಿಳೆಯೊಬ್ಬರು ತಮ್ಮ ಕಾರನ್ನು ಚಲಾಯಿಸಿದ್ದು, ಸಿಬ್ಬಂದಿಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಈ ಮಾರ್ಗದಲ್ಲಿ ಬರುವ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಅಥವಾ ಬೇರೆಡೆಗೆ ತಿರುಗಿಸಲಾಯಿತು.
ಶಂಕರಪಲ್ಲಿ ಬಳಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. 13 ಸೆಕೆಂಡುಗಳ ಸ್ಲಿಪ್‌ನಲ್ಲಿ ಕಿಯಾ ಸೋನೆಟ್ ಕಾರಿನಲ್ಲಿ ಮಹಿಳೆ ರೈಲ್ವೆ ಹಳಿಯ ಮೇಲೆ ಕಾರು ಓಡಿಸುತ್ತಿರುವುದನ್ನು ತೋರಿಸಲಾಗಿದೆ.
ರೈಲ್ವೆ ಸಿಬ್ಬಂದಿ ಹಲವಾರು ಸೂಚನೆಗಳನ್ನು ನೀಡಿದರೂ ಮಹಿಳೆ ವಾಹನವನ್ನು ನಿಲ್ಲಿಸಲಿಲ್ಲ ಮತ್ತು ರೈಲ್ವೆ ಹಳಿಯ ಮೇಲೆ ಕನಿಷ್ಠ ಆರರಿಂದ ಏಳು ಕಿಲೋಮೀಟರ್ ಓಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವಾರು ರೈಲ್ವೆ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಕಾರಿನ ಹಿಂದೆ ಓಡಿದ್ದಾರೆ. ರೈಲ್ವೆ ಸಿಬ್ಬಂದಿ ಆಕೆಯನ್ನು ತಡೆಯಲು ಯತ್ನಿಸಿದಾಗ ಇನ್ನೂ ವೇಗವಾಗಿ ಚಾಲನೆ ಮಾಡಿದ್ದಾಳೆ.ಅವರು ಕೊನೆಗೂ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಕಾರಿನಿಂದ ಹೊರಗೆ ತರಲು ಸುಮಾರು 20 ಜನರು ಹರಸಾಹಸಪಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಚಂದನಾ ದೀಪ್ತಿ ಪ್ರಕಾರ, ಮಹಿಳೆ ಆಕ್ರಮಣಕಾರಿಯಾಗಿದ್ದಳು ಮತ್ತು ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು. “ಈ ವಿಷಯದ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಅವರು ಇತ್ತೀಚಿನವರೆಗೂ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಉತ್ತರ ಪ್ರದೇಶದವರು” ಎಂದು ದೀಪ್ತಿ ಹೇಳಿದ್ದಾರೆ. “ವಾಹನದಿಂದ ಆಕೆಯ ಚಾಲನಾ ಪರವಾನಗಿ ಮತ್ತು ಪ್ಯಾನ್ ಕಾರ್ಡ್ ಅನ್ನು ವಶಪಡಿಸಿಕೊಂಡಿದ್ದೇವೆ” ಎಂದು ಅವರು ಹೇಳಿದರು.
ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸುತ್ತಿದ್ದಳೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್ಪಿ ಹೇಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು-ಹೈದರಾಬಾದ್ ರೈಲು ಸೇರಿದಂತೆ ಕನಿಷ್ಠ 10-15 ಪ್ಯಾಸೆಂಜರ್ ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
ಮಹಿಳೆಯನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ