ಪಂಜಾಬ್‌ನ ಬಟಾಲಾದಲ್ಲಿ ಗುರುವಾರ ಸಂಜೆ ನಡೆದ ಘಟನೆಯಲ್ಲಿ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಜಗ್ಗು ಭಗವಾನಪುರಿಯಾ ಅವರ ತಾಯಿ ಹರ್ಜಿತ್ ಕೌರ್ ಮತ್ತು ಅವರ ಜೊತೆಗಿದ್ದ ವ್ಯಕ್ತಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬಟಾಲಾದ ಸಿವಿಲ್ ಲೈನ್ಸ್ ಪ್ರದೇಶದ ಅಡಿಯಲ್ಲಿ ಬರುವ ಖಾಡಿಯನ್ ರಸ್ತೆಯಲ್ಲಿ ಗುರುವಾರ ರಾತ್ರಿ 9:30 ರ ಸುಮಾರಿಗೆ ಈ ದಾಳಿ ನಡೆದಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಪರಮವೀರ್ ಸಿಂಗ್ ಪ್ರಕಾರ, ಹರ್ಜಿತ್ ಕೌರ್ ಮತ್ತು ಕರಣವೀರ್ ಸಿಂಗ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಕಾರಿನೊಳಗೆ ಕುಳಿತಿದ್ದಾಗ ದಾಳಿಕೋರರು ಗುಂಡು ಹಾರಿಸಿದ್ದಾರೆ. ಇಬ್ಬರ ಮುಖ, ಎದೆ ಮತ್ತು ಹೊಟ್ಟೆಗೆ ಗುಂಡುಗಳು ತಗುಲಿ ಹಲವಾರು ಗಾಯಗಳಾಗಿದ್ದು, ದಾಳಿಕೋರರು ಕೊಲ್ಲುವ ಸ್ಪಷ್ಟ ಉದ್ದೇಶವನ್ನು ಹೊಂದಿದ್ದರು ಎಂದು ಸೂಚಿಸುತ್ತದೆ.
ಬಟಾಲಾ ಸಿವಿಲ್ ಆಸ್ಪತ್ರೆಗೆ ತಲುಪುವ ವೇಳೆಗೆ ಕರಣವೀರ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು, ಆದರೆ ತೀವ್ರವಾಗಿ ಗಾಯಗೊಂಡಿದ್ದ ಹರ್ಜಿತ್ ಕೌರ್ ಅವರನ್ನು ಅಮೃತಸರದ ಆಸ್ಪತ್ರೆಗೆ ಸಾಗಿಸಲಾಯಿತು. ಅವರನ್ನು ಉಳಿಸುವ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಅವರು ಸಾವಿಗೀಡಾದರು ಎಂದು ಡಿಎಸ್‌ಪಿ ಹೇಳಿದ್ದಾರೆ.
“ಮೋಟಾರ್ ಸೈಕಲ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಅವರ ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅಪರಾಧಿಗಳನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದೆ” ಎಂದು ಡಿಎಸ್‌ಪಿ ಸಿಂಗ್ ಹೇಳಿದ್ದಾರೆ. ಕೊಲೆಯ ಹಿಂದಿನ ಉದ್ದೇಶ ಏನೆಂಬುದು ತನಿಖೆ ನಂತರ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಹರ್ಜಿತ್ ಕೌರ್ ಭಗವಾನಪುರದ ಗ್ರಾಮ ಪಂಚಾಯತದ ಮಾಜಿ ಚುನಾಯಿತ ಸದಸ್ಯರಾಗಿದ್ದರು. ಈ ಘಟನೆಯು ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಗ್ಯಾಂಗ್ ಪೈಪೋಟಿಯ ಬಗ್ಗೆ ಆಂತಕಕ್ಕೆ ಕಾರಣವಾಗಿದೆ.
ಪಂಜಾಬ್‌ನ ಅತ್ಯಂತ ಕುಖ್ಯಾತ ಗ್ಯಾಂಗ್‌ಸ್ಟರ್ ಗಳಲ್ಲಿ ಒಬ್ಬರಾದ ಆಕೆಯ ಮಗ ಜಗ್ಗು ಭಗವಾನಪುರಿಯಾ ಅವರನ್ನು ಇತ್ತೀಚೆಗೆ ಪಿಐಟಿ-ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಯಿತು ಮತ್ತು ಈ ವರ್ಷದ ಮಾರ್ಚ್‌ನಲ್ಲಿ ಬಟಿಂಡಾ ಕೇಂದ್ರ ಜೈಲಿನಿಂದ ಅಸ್ಸಾಂನ ಸಿಲ್ಚಾರ್ ಜೈಲಿಗೆ ಸ್ಥಳಾಂತರಿಸಲಾಯಿತು. 2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯಲ್ಲಿ ಈತ ಪ್ರಮುಖ ಆರೋಪಿಗಳಲ್ಲಿ ಒಬ್ಬ. ಸುಲಿಗೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧಕ್ಕೆ ಸಂಬಂಧಿಸಿದ ಹಲವಾರು ಇತರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಭಗವಾನಪುರಿಯಾ ಕ್ರಿಮಿನಲ್ ಜಾಲಕ್ಕೆ ಸಂಬಂಧಿಸಿದ ಗ್ಯಾಂಗ್‌ನ ಪ್ರತೀಕಾರದ ಕೃತ್ಯವಾಗಿರಬಹುದೆಂಬ ಸಾಧ್ಯತೆಯೂ ಸೇರಿದಂತೆ ಹಲವಾರು ಸುಳಿವುಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶೂಟರ್‌ಗಳನ್ನು ಪತ್ತೆಹಚ್ಚಲು ಸುಳಿವು ಇರುವ ಯಾವುದೇ ಮಾಹಿತಿ ಇದ್ದರೆ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ