ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅರಣ್ಯ ಗುಹೆಯಿಂದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಪೊಲೀಸರು ರಕ್ಷಿಸಿದ ಕೆಲವು ದಿನಗಳ ನಂತರ, ತುಮಕೂರಿನ ಅಕ್ರಮ ವಲಸಿಗರ ಬಂಧನ ಕೇಂದ್ರದಲ್ಲಿರುವ ಅವರನ್ನು ಭೇಟಿ ಮಾಡಲು ಬಂದ ಆಕೆಯ ಪತಿಗೆ ಅನುಮತಿ ನಿರಾಕರಿಸಲಾಗಿದೆ. ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ಪ್ಪ್ರಜೆಯಾದ ಡ್ರೋರ್ ಲಿವ್ ಇನ್ ಸಂಗಾತಿ ಹಾಗೂ ಇಬ್ಬರು ಮಕ್ಕಳ ವಿಚಾರ ತಿಳಿದು ಭಾರತಕ್ಕೆ ಬಂದಿದ್ದ. ಮಕ್ಕಳು ತುಮಕೂರಿನಲ್ಲಿರುವ ವಿಚಾರ ತಿಳಿದು ಗುರುವಾರ ಸಂಜೆ ಮಕ್ಕಳನ್ನು ನೋಡಲು ಬಂದಿದ್ದ. ಆದರೆ ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಎಫ್ ಡಿಸಿ ಸಿಬ್ಬಂದಿ ಹೇಳಿದ್ದರಿಂದ ವಾಪಾಸಾಗಿದ್ದಾನೆ. 40 ವರ್ಷದ ನೀನಾ ಕುಟಿನಾ ಎಂಬ ಮಹಿಳೆ ಧ್ಯಾನಸ್ಥ ವಿಶ್ರಾಂತಿಗಾಗಿ ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು, ಆದರೆ ಅವರ ವೀಸಾ ಅವಧಿ ಮುಗಿದು ಎಂಟು ವರ್ಷಗಳಾಗಿವೆ.
ಗುರುವಾರ, ನೀನಾ ಅವರ ಪತಿ ಡ್ರೋರ್, ತನ್ನ ಕುಟುಂಬವನ್ನು ನೋಡುವ ಭರವಸೆಯಲ್ಲಿ ಬೆಂಗಳೂರಿನಿಂದ ತುಮಕೂರು ರಕ್ಷಣಾ ಕೇಂದ್ರಕ್ಕೆ ತೆರಳಿದ್ದರು, ಆದರೆ ಅವರಿಗೆ ನೀನಾ ಹಾಗೂ ಮಕ್ಕಳನ್ನು ಭೇಟಿ ಮಾಡಲು ನಿಕಾರಿಸಲಾಯಿತು ಎಂದು ವರದಿಯಾಗಿದೆ.
“ನನ್ನ ಹೆಣ್ಣುಮಕ್ಕಳನ್ನು ನೋಡಲು ಬಂದಿದ್ದೇನೆ, ಅವರು ಒಳಗೆ ಇದ್ದಾರೆ. ಆದರೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ(FRRO)ಯಿಂದ ಅಧಿಕೃತ ಪತ್ರ ಇಲ್ಲದಿದ್ದರೆ ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿಸಲಾಯಿತು ಎಂದು ಡ್ರೋರ್ ತಿಳಿಸಿದ್ದಾರೆ. ಕೇಂದ್ರದಲ್ಲಿ ಬಹಳ ಹೊತ್ತು ಕಾಯುತ್ತಿದ್ದ ನಂತರ, ಅಧಿಕಾರಿಗಳು ಎಫ್‌ಆರ್‌ಆರ್‌ಒ ಸಂಪರ್ಕಿಸಿ, ಮರುದಿನ ಬೆಳಿಗ್ಗೆ ಅನುಮೋದನೆ ಪಡೆಯಲು ಅವರ ಕಚೇರಿಗೆ ಭೇಟಿ ನೀಡಿ ಎಂದು ತಿಳಿಸಿದರು ಎಂದು ಅವರು ಹೇಳಿದರು.
ಈ ಘಟನೆಯು ರಷ್ಯಾ ಮಹಿಳೆ ಕುಟಿನಾ ಅವರ ಅಸಾಮಾನ್ಯ ಜೀವನಶೈಲಿ ಗಮನ ಸೆಳೆದಿದೆ. ಅವರು ತಮ್ಮ ಹೆಣ್ಣುಮಕ್ಕಳಾದ ಆರು ವರ್ಷದ ಪ್ರೇಮಾ ಮತ್ತು ನಾಲ್ಕು ವರ್ಷದ ಅಮಾ ಅವರೊಂದಿಗೆ ಜುಲೈ 9 ರಂದು ಗೋಕರ್ಣ ಬಳಿಯ ಅರಣ್ಯ ಗುಹೆಯಲ್ಲಿ ವಾಸಿಸುತ್ತಿರುವುದು ಪತ್ತೆಯಾಯಿತು. ಗೋಕರ್ಣ ಪೊಲೀಸರು, ರಾಮತೀರ್ಥ ಬೆಟ್ಟದಲ್ಲಿ ಸಂಜೆ 5 ಗಂಟೆ ಸುಮಾರಿಗೆ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ, ಅಪಾಯಕಾರಿ ಮತ್ತು ಅನೈರ್ಮಲ್ಯ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದ ಕುಟುಂಬವನ್ನು ಆಕಸ್ಮಿಕವಾಗಿ ನೋಡಿದರು.
ಕುಟಿನಾ ಅವರು ಆಧ್ಯಾತ್ಮಿಕ ಏಕಾಂತತೆಯನ್ನು ಹುಡುಕುತ್ತಾ ಮತ್ತು ಪ್ರಕೃತಿಗೆ ಹತ್ತಿರದಲ್ಲಿ ಬದುಕಲು ಗೋವಾದಿಂದ ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಗೆ ಬಂದಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದರು. ತನ್ನ ಹೆಣ್ಣುಮಕ್ಕಳು ಆರೋಗ್ಯವಂತರು, ಸುರಕ್ಷಿತರು ಮತ್ತು ಪರಿಸರದ ಮಧ್ಯೆ ಬೆಳೆಯುತ್ತಿದ್ದಾರೆ. “ಜನರು ಸುಳ್ಳುಗಳನ್ನು ಹರಡುತ್ತಿದ್ದಾರೆ. ನಾವು ಪ್ರಕೃತಿಗೆ ಹತ್ತಿರವಾಗಿ ಬದುಕುವುದರಲ್ಲಿ ಅನುಭವ ಹೊಂದಿದ್ದೇವೆ. ನನ್ನ ಹೆಣ್ಣುಮಕ್ಕಳು ಸಂತೋಷದಿಂದ ಆಟವಾಡುತ್ತಿದ್ದರು, ಜಲಪಾತದಲ್ಲಿ ಈಜುತ್ತಿದ್ದರು, ಕಲೆ ಕಲಿಯುತ್ತಿದ್ದರು. ನಾನು ಗ್ಯಾಸ್ ಸ್ಟೌವ್ ಮೇಲೆ ರುಚಿಕರವಾದ ಆಹಾರವನ್ನು ಬೇಯಿಸುತ್ತಿದ್ದೆ ಮತ್ತು ನಮ್ಮ ಜೀವನ ಸುಂದರವಾಗಿತ್ತು” ಎಂದು ಕುಟಿನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕುಟಿನಾ ಎಂಟು ವರ್ಷಗಳಿಗೂ ಹೆಚ್ಚು ಕಾಲ ಅವಧಿ ಮೀರಿದ ವೀಸಾದಲ್ಲಿ ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಎಂಬುದು ಗೊತ್ತಾಗಿದೆ.
ಮಕ್ಕಳಿಗೆ ನೀಡಲು ಗಿಫ್ಟ್ ನೊಂದಿಗೆ ಬಂದಿದ್ದ ಡ್ರೋರ್ ಗೆ ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಫಾರಿನ್ ಡಿಟೆನ್ಷನ್ ಸೆಂಟರ್ ನ ಕಿಟಕಿಯಲ್ಲಿ ಮಕ್ಕಳಿಗೆ ಹಾಯ್ ಹೇಳಿ ಬರಿಗೈನಲ್ಲಿ ವಾಪಾಸ್ ಆಗಿದ್ದಾನೆ.
2017ರಲ್ಲಿ ಭೇಟಿ….
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಡ್ರೋರ್ ನೀನಾಳನ್ನು 2017ರಲ್ಲಿ ಭೇಟಿಯಾಗಿದ್ದನಂತೆ. ಆ ಬಳಿಕ ಇಬ್ಬರು ಲೀವ್ ಇನ್ ರಿಲೇಷನ್ ನಲ್ಲಿ ಇದ್ದರಂತೆ. ನಂತರ ವೈಯಕ್ತಿಕ ಕಾರಣದಿಂದ ಇಬ್ಬರು ದೂರಾಗಿದ್ದರು. ಇಬ್ಬರು ಮಕ್ಕಳು, ತಾಯಿ ಜೊತೆಯೇ ವಾಸವಿದ್ದರಂತೆ. ವೃತ್ತಿಯಲ್ಲಿ ಮ್ಯೂಸಿಷಿನ್ ಹಾಗೂ ಬಟ್ಟೆ ವ್ಯವಹಾರದಲ್ಲಿರುವ ಡ್ರೋರ್ ಇಸ್ರೇಲ್ ನಲ್ಲಿ ವಾಸವಿದ್ದಾರೆ. ವರ್ಷದಲ್ಲಿ 6 ತಿಂಗಳಿಗೊಮ್ಮೆ ಭಾರತಕ್ಕೆ ಬಂದು ಮಕ್ಕಳ ಭೇಟಿ ಮಾಡುತ್ತಿದ್ದರಂತೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಗೋಕರ್ಣದಲ್ಲಿ ನಡೆದ ವಿಚಾರ ತಿಳಿದು ವಕೀಲರ ಮೂಲಕ ಮಕ್ಕಳ ಭೇಟಿಗೆ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ