ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯತ ವ್ಯಾಪ್ತಿಯ ಅಗಸಾಲ ಗ್ರಾಮದ ಸಮೀಪದ ಹೋಂ ಸ್ಟೇ ಬಳಿ ಅಕ್ರಮವಾಗಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆ ಮೇಲೆ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ 49 ಲಕ್ಷ ನಗದು, ನಾಲ್ಕು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಡಿವೈಎಸ್‌ಪಿ ಗೀತಾ ಪಾಟೀಲ ನೇತೃತ್ವದ ತಂಡ ಯಲ್ಲಾಪುರ ಹೆದ್ದಾರಿಯ ಬೈರುಂಬೆಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಗಸಾಲ ಗ್ರಾಮದ ವಿಆರ್‌ಆರ್ ಹೋಮ್ ಸ್ಟೇ ಮೇಲೆ ದಾಳಿ ನಡೆಸಿತ್ತು. ಜುಲೈ 23ರ ರಾತ್ರಿ 8:45ರ ಸುಮಾರಿಗೆ ಅಕ್ರಮವಾಗಿ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿರಸಿ ಗ್ರಾಮೀಣ ಠಾಣಾ ಪೊಲೀಸರು, ರಾತ್ರಿ 9:45ಕ್ಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 19 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳದಿಂದ ₹49,50,436 ನಗದು ಹಣ, ಜಮಖಾನಗಳು, ಇಸ್ಪೀಟ್ ಕಾರ್ಡ್‌ಗಳು, ಲಕ್ಷಾಂತರ ಮೌಲ್ಯದ ನಾಲ್ಕು ಕಾರುಗಳು ಹಾಗೂ 15ಕ್ಕೂ ಹೆಚ್ಚಿನ ಮೊಬೈಲ್‌ಗಳನ್ನುವಶಕ್ಕೆ ಪಡೆದಿದ್ದಾರೆ
ಬಂಧಿತರು ಹಾವೇರಿ, ದಾವಣಗೆರೆ ಮೂಲದವರಾಗಿದ್ದಾರೆ. ಘಟನೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ. ಕೃಷ್ಣಮೂರ್ತಿ, ಜಗದೀಶ ಎಂ. ಮಾರ್ಗದರ್ಶನದಲ್ಲಿ, ಶಿರಸಿ ಉಪವಿಭಾಗದ ಡಿ.ವೈ.ಎಸ್.ಪಿ ಗೀತಾ ಪಾಟೀಲ ನೇತೃತ್ವದಲ್ಲಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ ಅಶೋಕ ಆರ್ ರಾಠೋಡ ಮತ್ತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಎ.ಎಸ್.ಐ ಪ್ರದೀಪ ರೇವಣಕರ, ಸಂತೋಷ ಕಮಟಗೇರಿ, ರಾಘವೇಂದ್ರ ಜಿ, ಗಣಪತಿ ಪಟಗಾರ, ಷಣ್ಮುಖ ಮಿರಾಶಿ, ರವಿ ಉಕ್ಕಡಗಾತ್ರಿ. ಭರತಕುಮಾರ, ಮಾರುತಿ ಗೌಡ ಹಾಗೂ ಮುಂಡಗೋಡ ಪೊಲೀಸ್ ಠಾಣೆಯ ಕೋಟ್ರೇಶ ನಾಗರವಳ್ಳಿ. ಅಣ್ಣಪ್ಪ ಬುಡಗೇರಿ ಹಾಗೂ ಚಾಲಕರಾದ ಕೃಷ್ಣ ರೇವಣಕರ, ಮೌಲಾಲಿ ಮರಗಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಬಹುಮಾನ ಘೋಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ