ಶಿರಸಿ: ಸೈಬರ್ ವಂಚಕರ ಜಾಲಕ್ಕೆ ಸಿಕ್ಕಿಹಾಕಿಕೊಂಡು ವ್ಯಕ್ತಿಯೊಬ್ಬರು ಬರೋಬ್ಬರಿ 89.90 ಲಕ್ಷ ರೂ. ಕಳೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಈ ಸಂಬಂಧ ಶಿರಸಿಯ ಹೊಸಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿರಸಿಯ ಪ್ರಗತಿ ನಗರದ ರವೀಂದ್ರ ಕೃಷ್ಣ ಹೆಗಡೆ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ವಾಟ್ಸ್‌ಪ್ ವೀಡಿಯೊ ಕರೆ ಬಂದಿದ್ದು, ಕರೆ ಮಾಡಿದವರು ತನ್ನುನ್ನು ಸಂಜಯ ಎಂದು ಗುರುತಿಸಿಕೊಂಡಿದ್ದು, ಮುಂಬೈ ಕೊಲಾಬಾ ಪೊಲೀಸರು ಮತ್ತು ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಖಾತೆಯಲ್ಲಿ ಕಪ್ಪು ಹಣದ ವ್ಯವಹಾರ ನಡೆದಿದೆ, ನಿರ್ದಿಷ್ಟವಾಗಿ ಜೆಟ್ ಏರ್‌ವೇಸ್‌ನ ಮನೀಶ್ ಗೋಯಲ್ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ ಎಂದು ಕರೆ ಮಾಡಿದವರು ಹೇಳಿದ್ದಾರೆ. ಅಲ್ಲದೆ, ನಿಮ್ಮ ಮೇಲೆ ಕಪ್ಪು ಹಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ಪ್ರಕರಣ ದಾಖಲಿಸುವುದನ್ನು ತಪ್ಪಿಸಬೇಕು ಎಂದರೆ ಎಂದು ತಾವು ಹೇಳಿದ ಸೂಚನೆ ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಕರಣ ದಾಖಲಿಸಿವದಾಗಿ ಪೊಲೀಸರೇ ಹೇಳಿದ್ದಾರೆ ಎಂದು ಭಾವಿಸಿ ಗಾಬರಿಯಾದ ರವೀಂದ್ರ ಹೆಗಡೆಯವರು, ಸೈಬರ್ ವಂಚಕರ ಸೂಚನೆಗಳಿಗೆ ಮಣಿದು ಅವರು ಸೂಚಿಸಿದಂತೆ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ಹಂಹಂತವಾಗಿ ವಂಚಕರು ಹೇಳಿದ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಿಂದ ಒಟ್ಟು ₹89,90,000 ಹಣವನ್ನು ಸೈಬರ್ ವಂಚಕರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ವಂಚನೆಗೆ ಒಳಗಾದ ನಂತರ ರವೀಂದ್ರ ಹೆಗಡೆಯವರುಗೆ ನಂತರ ಅನುಮಾನ ಬಂದು ಈ ಬಗ್ಗೆ ಮನೆಯವರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಈ ವಂಚನೆ ನಡೆಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಂಡು ತಮ್ಮ ಹಣವನ್ನು ತಮಗೆ ಮರಳಿ ದೊರಕುವಂತೆ ಮಾಡಬೇಕು ಎಂದು ದೂರಿನಲ್ಲಿ ಕೋರಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಕಲಂ: 319(2), 318 (4) ಮತ್ತು ಐ.ಟಿ ಆ್ಯಕ್ಟ್ 66 (ಸಿ), 66 (ಡಿ) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ