
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದ ಅತಿದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಒಂದಾದ ಆಪರೇಷನ್ ಅಖಾಲ್ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಈ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿವೆ. ಇದೇವೇಳೆ ಓರ್ವ ಸೈನಿಕ ಗಾಯಗೊಂಡಿದ್ದಾರೆ.
ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ನಂತರ, ಈ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಒಟ್ಟು ಭಯೋತ್ಪಾದಕರ ಸಂಖ್ಯೆ ಆರಕ್ಕೆ ತಲುಪಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ರಾತ್ರಿಯಿಡೀ ಸ್ಫೋಟಗಳು ಮತ್ತು ಗುಂಡಿನ ಶಬ್ದಗಳು ಮುಂದುವರೆದವು. ಭಯೋತ್ಪಾದಕರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್‌ನ ಜಂಟಿ ತಂಡದ ನಡುವಿನ ಎನ್‌ಕೌಂಟರ್ ಇನ್ನೂ ನಡೆಯುತ್ತಿದೆ.

ಶುಕ್ರವಾರ, ಅಖಾಲ್ ಅರಣ್ಯದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಸುತ್ತುವರಿದು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಅರಣ್ಯದ ವ್ಯಾಪ್ತಿಯಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆಯಿತು.
ವರದಿಗಳ ಪ್ರಕಾರ, ಶನಿವಾರ ಕೊಲ್ಲಲ್ಪಟ್ಟ ಭಯೋತ್ಪಾದಕರು ನಿಷೇಧಿತ ಲಷ್ಕರ್-ಎ-ತೈಬಾ (LeT) ನ ಒಂದು ಅಂಗವಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಗೆ ಸೇರಿದವರು ಎಂದು ಹೇಳಲಾಗಿದೆ. 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು ಈ ಸಂಘಟನೆ ಹೊತ್ತುಕೊಂಡಿತ್ತು.
ಭದ್ರತಾ ಪಡೆಗಳು ಶ್ರೀನಗರದ ದಚಿಗಮ್ ಪ್ರದೇಶದ ಬಳಿ ಪಹಲ್ಗಾಮ್ ಹತ್ಯಾಕಾಂಡದ ಹಿಂದಿರುವ ಲಷ್ಕರ್ ಭಯೋತ್ಪಾದಕರನ್ನು ಆಪರೇಷನ್ ಮಹಾದೇವನಲ್ಲಿ ಕೊಂದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.
ಜುಲೈ 29 ರಂದು ಮತ್ತೊಂದು ಕಾರ್ಯಾಚರಣೆಯಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿತ್ತು. ಒಟ್ಟಾರೆಯಾಗಿ, ಏಪ್ರಿಲ್ 22 ರ ದಾಳಿಯ ನಂತರ ಸುಮಾರು 20 ಉನ್ನತ ಮಟ್ಟದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಇದಲ್ಲದೆ, ಮೇ 6-7 ರ ನಡುವೆ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನದಲ್ಲಿದ್ದ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ