
ಶಿಮ್ಲಾ : ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಬುಲ್ಡೋಜರ್ ಒಂದು 300 ಮೀಟರ್ ಆಳದ ಕಡಿದಾದ ಕಂದಕಕ್ಕೆ ಬಿದ್ದ ಘಟನೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶನಿವಾರ ನಡೆದಿದೆ.
ಈ ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜಬ್ಲಿಯ ರಾಷ್ಟ್ರೀಯ ಹೆದ್ದಾರಿ 5 ರಲ್ಲಿ ಬುಲ್ಡೋಜರ್ 300 ಮೀಟರ್ ಆಳದ ಕಂದಕಕ್ಕೆ ಬೀಳುತ್ತಿರುವುದನ್ನು ಕಾಣಬಹುದು.
ಯಂತ್ರವು ಕಮರಿಗೆ ಬಿದ್ದಿದ್ದು, ಬುಲ್ಡೋಜರ್ ಚಾಲಕನಿಗೆ ಈ ಘಟನೆಯಲ್ಲಿ ಗಂಭೀರ ಗಾಯಗಳಾಗಿವೆ. ಮಾಧ್ಯಮ ವರದಿಗಳ ಪ್ರಕಾರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಸಾವಿಗೀಡಾಗಿದ್ದಾರೆ.
ಘಟನೆಯ ವೀಡಿಯೊವನ್ನು ಪ್ರವಾಸಿಗರು ಸೆರೆಹಿಡಿದಿದ್ದಾರೆ. ಮೈ ಜುಂ ಎನ್ನುವ ವೀಡಿಯೊದಲ್ಲಿ, ಜಬ್ಲಿಯ ರಾಷ್ಟ್ರೀಯ ಹೆದ್ದಾರಿ 5 ರ ಕಡಿದಾದ ಪರ್ವತದ ಇಳಿಜಾರಿನಲ್ಲಿ ಜೆಸಿಬಿ ಬೀಳುತ್ತಿರುವುದು ಕಂಡುಬಂದಿದೆ, ಅಲ್ಲಿ ಅದು ಮಳೆಯಿಂದ ಬ್ಲಾಕ್ ಆಗಿದ್ದ ರಸ್ತೆಯನ್ನು ತೆರವು ಮಾಡುತ್ತಿತ್ತು. ಬೆಟ್ಟದಿಂದ ಬಂಡೆಗಳು ಉರಳಿ ಬಿದ್ದು ಅದಕ್ಕೆ ಬಡಿದ ನಂತರ ಜೆಸಿಪಿ 300 ಮೀಟರ್ ಕಮರಿಗೆ ಬಿದ್ದಿದೆ ಎಂದು ಹೇಳಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ
ಪ್ರವಾಸಿ ತಾಣವಾದ ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಹಿಮಾಚಲ ಪ್ರದೇಶ ಸರ್ಕಾರದ ಪ್ರಕಾರ, ಖಬ್-ಗ್ರಾಂಫು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 404 ರಸ್ತೆಗಳನ್ನು ಮುಚ್ಚಲಾಗಿದೆ.
ಈ 404 ರಸ್ತೆಗಳಲ್ಲಿ, ವಿಪತ್ತು ಪೀಡಿತ ಮಂಡಿ ಜಿಲ್ಲೆಯಲ್ಲಿ 174 ರಸ್ತೆಗಳು, ಚಂಬಾದಲ್ಲಿ 111 ಮತ್ತು ಕುಲ್ಲುದಲ್ಲಿ 67 ರಸ್ತೆಗಳು ಮುಚ್ಚಲ್ಪಟ್ಟಿವೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ. 196 ನೀರು ಸರಬರಾಜು ಯೋಜನೆಗಳು ಪರಿಣಾಮ ಬೀರಿವೆ.
ಈವರೆಗೆ, ಮಳೆ ಸಂಬಂಧಿತ ಘಟನೆಗಳಿಂದಾಗಿ 101 ಸಾವುಗಳು ಸಂಭವಿಸಿವೆ, 36 ಜನರು ಕಾಣೆಯಾಗಿದ್ದಾರೆ. ರಾಜ್ಯದಲ್ಲಿ 1,600 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಹಾನಿಗೊಳಗಾಗಿವೆ. ರಾಜ್ಯವು 51 ದಿಢೀರ್ ಪ್ರವಾಹಗಳು, 28 ಮೇಘಸ್ಫೋಟಗಳು ಮತ್ತು 45 ಪ್ರಮುಖ ಭೂಕುಸಿತಗಳಿಗೆ ಸಾಕ್ಷಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ