
ಬೆಂಗಳೂರು : ಕರ್ನಾಟಕದ ಬಡ ಕುಟುಂಬದ ವಿದ್ಯಾರ್ಥಿನಿಯೊಬ್ಬಳಿಗೆ ಅಂತಾರಾಷ್ಟ್ರೀಯ ಕ್ರಿಕೆಟಿಗ ರಿಷಭ್ ಪಂತ್ ಸಹಾಯ ಹಸ್ತ ಚಾಚಿದ್ದಾರೆ ಎಂದು ವರದಿಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಿಳಗಿ ತಾಲ್ಲೂಕಿನ ರಬಕವಿ ಗ್ರಾಮದ ವಿದ್ಯಾರ್ಥಿನಿ ಜ್ಯೋತಿ ಕಣಬೂರ ಅವರು ಜಮಖಂಡಿಯ ಬಿಎಲ್‌ಡಿ ಕಾಲೇಜಿನಲ್ಲಿ ಬಿಸಿಎ ಕೋರ್ಸ್‌ನ ಮೊದಲ ಸೆಮಿಸ್ಟರ್‌ಗೆ ಪ್ರವೇಶ ಪಡೆದಿದ್ದರು. ಪಿಯುಸಿಯಲ್ಲಿ ಶೇ. 85 ರಷ್ಟು ಅಂಕ ಗಳಿಸಿದ್ದರೂ, ಆರ್ಥಿಕ ತೊಂದರೆಗಳು ಆಕೆಯ ಶೈಕ್ಷಣಿಕ ಆಕಾಂಕ್ಷೆಗಳನ್ನು ಈಡೇರದ ಆತಂಕಕ್ಕೆ ಕಾರಣವಾಗಿತ್ತು. ಮನೆಯಲ್ಲಿ ಕಡುಬಡತನ. ಆಕೆಯ ತಂದೆ ತೀರ್ಥಯ್ಯ ಕಣಬೂರ ಹಣ ಹೊಂದಿಸಲಾಗದೆ ಪರದಾಡುತ್ತಿದ್ದರು. ಕುಟುಂಬಕ್ಕೆ 40,000 ರೂಪಾಯಿ ಪ್ರವೇಶ ಶುಲ್ಕವನ್ನು ಭರಿಸಲು ಸಾಧ್ಯವಾಗಿರಲಿಲ್ಲ. ಈ ವಿಷಯ ಅವರ ಕುಟುಂಬದ ಹಿತೈಷಿ ಅದೇ ಊರಿನ ಅನಿಲ ಹುಣಸಿಕಟ್ಟಿ ಎಂಬ ಯುವಕನಿಗೆ ಗೊತ್ತಾಗಿದೆ. ಅನಿಲ ಹುಣಸಿಕಟ್ಟಿ ಸ್ನೇಹಿತರು ಐಪಿಎಲ್‌ನಲ್ಲಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಅನಿಲ ವಿಷಯ ತಿಳಿಸಿದ್ದಾರೆ. .
ಅನಿಲ ಅವರ ಐಪಿಎಲ್ ಸ್ನೇಹಿತರು ಈ ವಿಚಾರವನ್ನು ರಿಷಭ್ ಪಂತ್ ಅವರ ಗಮನಕ್ಕೆ ತಂದಿದ್ದಾರೆ. ನಂತರ ಅವರು ಜ್ಯೋತಿ ಅವರ ಬಾಕಿ ಇದ್ದ 40 ಸಾವಿರ ಶುಲ್ಕವನ್ನು ಭರಿಸಿ ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾಗಿದ್ದಾರೆ. ಜ್ಯೋತಿ ಹಾಗೂ ಅವರ ಕುಟುಂಬ ರಿಷಭ್ ಪಂತ ಅವರಿಗೆ ಕೃತಜ್ಞತೆ ಸಲ್ಲಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ