
ಬೆಂಗಳೂರು : ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಅಕ್ರಮವಾಗಿ ಮತದಾನ ನಡೆಸಲಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ದೆಹಲಿಯಲ್ಲಿ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ, ಇಂದು (ಆಗಸ್ಟ್ 8) ಬೆಂಗಳೂರಿನ ಮಹದೇವಪುರ ಹಾಗೂ ರಾಜಾಜಿನಗರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಪ್ರತಿಭಟನೆ ನಡೆಯಿತು. ರಾಹುಲ್ ಗಾಂಧಿ ಅನುಪಸ್ಥಿತಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ನಿಯೋಗ ಮತಗಳ್ಳತನ ಆರೋಪ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ. ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಈ ಬಗ್ಗೆ ಚುನಾವಣಾ ಆಯೋಗ ಸೂಚಿಸಿದಂತೆ ಘೋಷಣಾ ಪತ್ರಕ್ಕೆ ಸಹಿ ಹಾಕಿ ದೂರು ಕೊಡಬೇಕಾಗಿತ್ತು. ಡಿ.ಕೆ. ಶಿವಕುಮಾರ ಅವರು ಬೆಂಗಳೂರಿನಲ್ಲಿ ರಾಜ್ಯ ಚುನಾವಣೆ ಆಯೋಗದ ಕಚೇರಿಗೆ ತೆರಳಿ ದೂರು ನೀಡಿದರು. ಆದರೆ, ರಾಹುಲ್ ಗಾಂಧಿ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ ನಿಯೋಗದಲ್ಲಿ ಇರಲಿಲ್ಲ. ಮೊದಲಿಗೆ ರಾಹುಲ್ ಗಾಂಧಿನೇ ನಿಯೋಗದಲ್ಲಿ ತೆರಳಿ ದೂರು ನೀಡಲು ಉದ್ದೇಶಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬದಲಾವಣೆ ಹಿನ್ನೆಲೆ ರಾಹುಲ್ ಗಾಂಧಿ ದೂರು ಕೊಡಲು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಲಿಲ್ಲ.ರಾಹುಲ್ ಗಾಂಧಿ ಇಕ್ಕಟ್ಟಿನಲ್ಲಿ ಸಿಲುಕುವುದು ಬೇಡ ಎಂಬ ಕಾರಣಕ್ಕೆ ತಾವೇ ಖುದ್ದಾಗಿ ದೂರು ನೀಡುವ ಬದಲು ರಾಜ್ಯ ನಾಯಕರಿಗೆ ದೂರು ನೀಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ….
ಬೆಂಗಲೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತಾಡಿದ ರಾಹುಲ್ ಗಾಂಧಿ, ಒಬ್ಬರಿಗೆ ಒಂದು ಮತ ಎಂಬುದು ಸಂವಿಧಾನದ ಮೂಲಭೂತ ಅಡಿಪಾಯ. ಮತದಾನ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ದೇಶದ ವಿವಿಧ ಸಂಸ್ಥೆಗಳ ದುರ್ಬಳಕೆಯಿಂದ ಸಂವಿಧಾನ ಮುಗಿಸುವ ಕೆಲಸ ನಡೆಯುತ್ತಿದೆ ಎಂದು ರಾಹುಲ್ ಆರೋಪ ಮಾಡಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ 5 ವಿಧಗಳಲ್ಲಿ ಮತ ಕಳ್ಳತನವಾಗಿದೆ. ವಿಳಾಸವಿಲ್ಲದ 40,000ಕ್ಕೂ ಹೆಚ್ಚು ಮತದಾರರನ್ನು ಪತ್ತೆಹಚ್ಚಿದ್ದೇವೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಮತಗಳ್ಳತನವಾಗಿದೆ. ಚುನಾವಣಾ ಆಯೋಗ ನನಗೆ ಪ್ರಮಾಣಪತ್ರ ನೀಡಲು ಹೇಳುತ್ತಿದೆ. ಸಂವಿಧಾನದ ಮೇಲೆ ಲೋಕಸಭೆಯೊಳಗೆ ಪ್ರಮಾಣ ಮಾಡಿದ್ದೇನೆ. ಚುನಾವಣಾ ಆಯೋಗ ವೆಬ್ಸೈಟ್ ಬಂದ್ ಮಾಡಿದೆ. ದೇಶದ ಚುನಾವಣಾ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ನೀಡಬೇಕು. ಮತಗಟ್ಟೆಗಳ ದೃಶ್ಯಾವಳಿ ನೀಡಿದರೆ ಮತಗಳ್ಳತನ ಸಾಬೀತು ಮಾಡುತ್ತೇನೆ ಎಂದು ಚುನಾವಣೆ ಆಯೋಗಕ್ಕೆ ಸವಾಲು ಹಾಕಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನ ಪಡೆಯಿತು. ಅದಾದ 4 ತಿಂಗಳಲ್ಲಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಇದರ ಹಿಂದಿನ ವಿಷಯವನ್ನು ನಾವು ಪತ್ತೆ ಹಚ್ಚಿದ್ದೇವೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೊಸದಾಗಿ 1 ಕೋಟಿ ಜನರು ಮತದಾನ ಮಾಡಿದ್ದಾರೆ ಎಂಬುದು ತಿಳಿದುಬಂದಿದೆ. ಇದರಿಂದ ನಮಗೆ ಮೋಸವಾಗಿದೆ ಎಂಬ ಅನುಮಾನ ಬಂತು ಎಂದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ