ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ದ್ವೇಷವನ್ನು ಪ್ರೇರೇಪಿಸುವಂತಹ ಹೇಳಿಕೆ ನೀಡಿದ್ದಕ್ಕಾಗಿ ಮತ್ತು ಅಶ್ಲೀಲವಾಗಿ ಮಾತನಾಡಿದ ವೀಡಿಯೊವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ, ಪುನೀತ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದ ಮಾಹಿತಿ ಲಭ್ಯವಾಗಿದೆ.
‘ಅಪರಾಧ ಕೃತ್ಯಗಳನ್ನು ನಡೆಸಲು ಪ್ರೇರಣೆಯಾಗುವಂತಹ ಮತ್ತು ಅಶ್ಲೀಲ ಹಾಗೂ ಸಾರ್ವಜನಿಕರಿಗೆ ಕಿರಿ ಕಿರಿಯುಂಟಾಗುವಂತೆ ಆರೋಪಿ ಗಿರೀಶ ಮಟ್ಟಣ್ಣನವರ ಮಾತನಾಡಿರುವ ವಿಡಿಯೊವನ್ನು ತಮ್ಮ ಫೇಸ್ಬುಕ್ನಲ್ಲಿ ಬುಧವಾರ (ಆ.6ರಂದು) ಪ್ರಸಾರಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ನಿವಾಸಿ ಚರಣ ಶೆಟ್ಟಿ (32) ಎಂಬವರು ದೂರು ನೀಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 57 (ಅಪರಾಧ ನಡೆಸಲು ಪ್ರೇರಣೆ), ಸೆಕ್ಷನ್ 296 (ಅಶ್ಲೀಲ ವಿಚಾರ ಪ್ರಸಾರ) ಹಾಗೂ ಸೆಕ್ಷನ್ 190ರ (ಅಕ್ರಮ ಕೂಟ ರಚನೆ) ಅಡಿ ಪ್ರಕರಣ ದಾಖಲಾಗಿದೆ.’
‘ಪ್ರಾದೇಶಿಕವಾಗಿ ಜನರ ನಡುವೆ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕರಲ್ಲಿ ಅಪಾಯದ ಭೀತಿಯನ್ನು ಸೃಷ್ಟಿಸುವಂತಹ ಹೇಳಿಕೆಗಳನ್ನು ಆರೋಪಿ ಮಹೇಶ ತಿಮರೋಡಿ ಅವರು ಯೂಟ್ಯೂಬ್ನಲ್ಲಿ ಗುರುವಾರ (ಆ.7ರಂದು) ಪ್ರಸಾರ ಮಾಡಿದ್ದಾರೆ’ ಎಂದು ಆರೋಪಿಸಿ ಅವರು ಮತ್ತೊಂದು ದೂರು ನೀಡಿದ್ದಾರೆ. ಬಿಎನ್ಎಸ್ ಸೆಕ್ಷನ್ 353(2)ರ (ಧರ್ಮ, ಜಾತಿ ಜನಾಂಗ ಮೊದಲಾದುವುಗಳ ಆಧಾರದಲ್ಲಿ ಜನರ ನಡುವೆ ದ್ವೇಷ ಉಂಟುಮಾಡುವ ಹೇಳಿಕೆ ನೀಡುವುದು) ಅಡಿ ಪ್ರಕರಣ ದಾಖಲಾಗಿದೆ.
“ಪುನೀತ್ ಕೆರೆಹಳ್ಳಿ ಅಶ್ಲೀಲವಾಗಿ ಮಾತನಾಡಿರುವ ವೀಡಿಯೊವನ್ನು ಯೂ ಟ್ಯೂಬ್ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಕಸಬಾ ಗ್ರಾಮದ ನಿವಾಸಿ ಜೆರೋಮ್ ಬರ್ಬೋಝಾ (37) ದೂರು ನೀಡಿದ್ದು, ಬಿಎನ್ಎಸ್ ಸೆಕ್ಷನ್ 296ರ ಅಡಿ ಪ್ರಕರಣ ದಾಖಲಾಗಿದೆ’ ಎಂದು ಹೇಳಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ