ನವದೆಹಲಿ: ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್, ಶಿವಸೇನೆ (ಯುಬಿಟಿ) ನಾಯಕರಾದ ಸಂಜಯ ರಾವತ್ ಹಾಗೂ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ವಿರೋಧ ಪಕ್ಷದ ಹಿರಿಯ ಸಂಸದರನ್ನು ದೆಹಲಿ ಪೊಲೀಸರು ಸೋಮವಾರ ಬೆಳಿಗ್ಗೆ ಬಂಧಿಸಿದ್ದಾರೆ.
ಅವ್ಯವಸ್ಥೆ, ಘೋಷಣೆ ಕೂಗುವಿಕೆ, ಬಂಧನ ಮತ್ತು ಧರಣಿ ಪ್ರತಿಭಟನೆಯ ನಡುವೆ, ಇಬ್ಬರು ತೃಣಮೂಲ ಕಾಂಗ್ರೆಸ್ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಮಿತಾಲಿ ಬಾಗ್ ಮೂರ್ಛೆ ಹೋದರು. ಸಹ ರಾಜಕಾರಣಿಗಳು ನೀರು ಮತ್ತು ಪ್ರಥಮ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿತು. ಬಾಗ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ರಾಹುಲ್ ಗಾಂಧಿ ಮತ್ತು ಅವರ ಸಹೋದ್ಯೋಗಿಗಳನ್ನು ಬಸ್ಸಿನಲ್ಲಿ ಕರೆದೊಯ್ಯಲಾಯಿತು. ಸಂಸತ್ತಿನ ಬಳಿ ಮೆರವಣಿಗೆ ಪ್ರಾರಂಭವಾಗಿ ಚುನಾವಣಾ ಆಯೋಗದ ಪ್ರಧಾನ ಕಚೇರಿಯಾದ ನಿರ್ವಾಚನ ಸದನದ ಕಡೆಗೆ ಸಾಗಿತು. ಪ್ರಜಾಪ್ರಭುತ್ವದ ಹಕ್ಕುಗಳನ್ನು ಕದಿಯುವುದು” ಮತ್ತು “ ಮತ ಕಳ್ಳತನʼ ಮುಂತಾದ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದ ವಿಪಕ್ಷಗಳ ಸಂಸದರು ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾ ಮೆರವಣಿಗೆಯನ್ನು ಮಧ್ಯದಲ್ಲೇ ತಡೆಯಲಾಯಿತು. ನಂತರ ಸಂಸದರು ರಸ್ತೆಯಲ್ಲಿ ಕುಳಿತು ತಮ್ಮ ಪ್ರತಿಭಟನೆ ಮುಂದುವರೆಸಿದರು.
ಹಲವಾರು ಸಂಸದರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದರು, ಆದರೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್, ತೃಣಮೂಲ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಸುಷ್ಮಿತಾ ದೇವ್ ಮತ್ತು ಕಾಂಗ್ರೆಸ್ ಸದಸ್ಯರಾದ ಸಂಜನಾ ಜಾತವ್ ಮತ್ತು ಜೋತಿಮಣಿ ಸೇರಿದಂತೆ ನಾಯಕರು ಬ್ಯಾರಿಕೇಡ್ಗಳನ್ನು ಹತ್ತಿ ಘೋಷಣೆಗಳನ್ನು ಕೂಗಿದರು.
ಬಂಧನದ ನಂತರ, ರಾಹುಲ್ ಗಾಂಧಿ “ಈ ಹೋರಾಟ ರಾಜಕೀಯವಲ್ಲ, ಸಂವಿಧಾನವನ್ನು ಉಳಿಸುವುದಕ್ಕಾಗಿ” ಎಂದು ರಾಹುಲ್ ಗಾಂಧಿ ವರದಿಗಾರರಿಗೆ ತಿಳಿಸಿದರು.
ಸತ್ಯವು ದೇಶದ ಮುಂದೆ ಇದೆ ಎಂದರು. ಜನರ ಮತದಾನದ ಹಕ್ಕನ್ನು ರಕ್ಷಿಸುವುದೇ ಎಸ್ಐಆರ್ ವಿರುದ್ಧದ ಹೋರಾಟ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮೆರವಣಿಗೆಯಲ್ಲಿ ಪ್ರಮುಖರಾದ ಟಿ.ಆರ್. ಬಾಲು (ಡಿಎಂಕೆ), ಸಂಜಯ ರಾವತ್ (ಶಿವಸೇನೆ-ಯುಬಿಟಿ), ಡೆರೆಕ್ ಒ’ಬ್ರೇನ್ (ಟಿಎಂಸಿ), ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಡಿಎಂಕೆ, ಆರ್ಜೆಡಿ, ಎಡ ಪಕ್ಷಗಳಂತಹ ವಿಪಕ್ಷಗಳ ಇತರ ಸಂಸದರಿದ್ದರು.
ಜಂಟಿ ಪೊಲೀಸ್ ಆಯುಕ್ತ ದೀಪಕ ಪುರೋಹಿತ್ ವಿಪಕ್ಷಗಳ ಕೆಲ ನಾಯಕರ ಬಂಧನವನ್ನು ದೃಢಪಡಿಸಿದರು. “ಬಂಧನದಲ್ಲಿರುವ ಇಂಡಿಯಾ ಮೈತ್ರಿಕೂಟದ ನಾಯಕರನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ” ಎಂದು ಹೇಳಿದರು. ಇಷ್ಟೊಂದು ಜನ ಸೇರುವ ಪ್ರತಿಭಟನೆಗೆ ಪೊಲೀಸರ ಅನುಮತಿ ಇರಲಿಲ್ಲ ಮತ್ತು ಕೇವಲ 30 ಸಂಸದರ ಸಮೂಹಕ್ಕೆ ಮಾತ್ರ ಮೆರವಣಿಗೆ ನಡೆಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಅವಕಾಶ ನೀಡಲಾಗಿತ್ತು ಎಂದು ಪುರೋಹಿತ್ ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಮೆರವಣಿಗೆಯಲ್ಲಿ ಬಂದರು. ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ನಾವು ಅವರನ್ನು ತಡೆದಿದ್ದೇವೆ. ಕೆಲವು ಸಂಸದರು ಬ್ಯಾರಿಕೇಡ್ಗಳನ್ನು ಜಿಗಿಯಲು ಪ್ರಯತ್ನಿಸಿದರು.. ಅವರನ್ನೂ ಬಂಧಿಸಲಾಯಿತು” ಎಂದು ಉಪ ಪೊಲೀಸ್ ಆಯುಕ್ತ ದೇವೇಶಕುಮಾರ ಮಹ್ಲಾ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಎರಡು ಪೊಲೀಸ್ ಬ್ಯಾರಿಕೇಡ್ಗಳ ಮೇಲೆ ಹತ್ತುವುದನ್ನು ದೃಶ್ಯಾವಳಿ ತೋರಿಸಿದೆ. ವಿಪಕ್ಷಗಳ ನಾಯಕರ ಪ್ರತಿಭಟನಾ ಮೆರವಣಿಗೆಯನ್ನು “ಅರಾಜಕತೆಯ ಸ್ಥಿತಿ”ಯನ್ನು ಸೃಷ್ಟಿಸಲು “ಚೆನ್ನಾಗಿ ಯೋಚಿಸಿದ” ತಂತ್ರ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. “ಸಂವಿಧಾನದ ವಿರುದ್ಧ ಯಾರು ಕೆಲಸ ಮಾಡುತ್ತಿದ್ದಾರೆಂದು ದೇಶ ನೋಡಬಹುದು… ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವರದಿಗಾರರಿಗೆ ತಿಳಿಸಿದರು.
“ಮತದಾರರ ಪರಿಷ್ಕರಣೆ (ಬಿಹಾರದಲ್ಲಿ) ಮೊದಲ ಬಾರಿಗೆ ನಡೆಯುತ್ತಿಲ್ಲ… ಕಾಂಗ್ರೆಸ್ ಇವಿಎಂಗಳ (ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು) ಬಗ್ಗೆ ಸುಳ್ಳು ಹೇಳುತ್ತದೆ, ಅರಾಜಕತೆಯನ್ನು ಸೃಷ್ಟಿಸುವುದು ಅವರ ಚೆನ್ನಾಗಿ ಯೋಚಿಸಿದ ತಂತ್ರವಾಗಿದೆ ಎಂದು ರಾಹುಲ್ ಗಾಂಧಿ ಅವರನ್ನು ಟೀಕಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ