ಶಿರಸಿ : ಕೂಲಿ ಹಣ ನೀಡಿಲ್ಲ ಎಂದು ಸಲಾಕೆಯಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಮಾಟಗೇರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಮಾಟಗೇರಿಯ ರವೀಶ ಗಣಪತಿ ಚನ್ನಯ್ಯ (40) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಮಾಟಗೇರಿಯ ಮಂಜುನಾಥ ಬಸ್ಯಾ ಚನ್ನಯ್ಯ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದು, ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ರಾತ್ರಿ ಘಟನೆ ನಡೆದಿದೆ ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ನಿನ್ನೆ (ಗುರುವಾರ) ದಿನಗೂಲಿ ಹಣಕ್ಕಾಗಿ ವಾದಿರಾಜ ಮಠದ ಕಮಾನಿನ ಬಳಿ ಇಬ್ಬರ ನಡುವೆ ವಾಗ್ವಾದವಾಗಿತ್ತು ಎನ್ನಲಾಗಿದೆ. ಸಿಟ್ಟಿನಲ್ಲಿ ರವೀಶ ಗಣಪತಿ ಚನ್ನಯ್ಯ ಎಂಬವರಿಗೆ ಮಂಜುನಾಥ ಬಸ್ಯಾ ಕೆಲಸಕ್ಕಾಗಿ ತಂದಿದ್ದ ಗುದ್ದಲಿಯ ಸಲಾಕೆಯಿಂದ ಏಕಾಏಕಿ ತಲೆಗೆ ಹೊಡೆದಿದ್ದಾನೆ. ತಲೆಗೆ ಗಂಭೀರ ಗಾಯವಾಗಿ ವಿಪರೀತ ರಕ್ತಸ್ರಾವವಾಗಿ ರವೀಶ ಗಣಪತಿ ಚನ್ನಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಗುರುವಾರ ರಾತ್ರಿ 8:30ರ ಸುಮಾರಿಗೆ ಕಮಾಟಗೇರಿವಾದಿರಾಜ ಮಠದ ಕಮಾನಿನ ಬಳಿಯಲ್ಲಿ ಮದ್ಯದ ನಶೆಯಲ್ಲಿ ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ನಡುಗೆ ಜಗಳ ನಡೆದಿದೆ ಎನ್ನಲಾಗಿದೆ. ಕೂಲಿ ಹಣ 500 ರೂ. ಕೊಡುವುದು ಬಾಕಿಯಿದ್ದು, ಅದರಲ್ಲಿ ಕೊಲೆ ರವೀಶ ಅವರು ಆರೋಪಿಗೆ 300 ರೂ. ನೀಡಿದ್ದಾರೆ. ಆದರೆ ಇನ್ನೂ 200 ರೂ. ನೀಡದ ಕಾರಣ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ನಿಖರ ಕಾರಣ ತನಿಖೆಯಿಂದ ತಿಳಿದುಬರಲಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ