ಬೆಳಗಾವಿ : ಶನಿವಾರ ಬೆಳಗಾವಿಯಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವೇಸ್ ವಿಮಾನ ಪ್ರಯಾಣ ಆರಂಭಿಸಿದ ನಂತರ ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲಿ ಲ್ಯಾಂಡ್ ಆಗುವ ಬದಲು ಪುನಃ ಬೆಳಗಾವಿ ನಿಲ್ದಾಣಕ್ಕೆ ಬಂದು ಇಳಿದ ಘಟನೆ ನಡೆದಿರುವುದು ವರದಿಯಾಗಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಸ್ಟಾರ್ ಏರ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತ್ತೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೇ ತುರ್ತು ಲ್ಯಾಂಡ್ ಆಗಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರಯಾಣಿಕರು, ವಿಮಾನ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.
‘ಸ್ಟಾರ್ ಏರ್ ನ ಎಸ್5111 ವಿಮಾನದಲ್ಲಿ 48 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 7:50ಕ್ಕೆ ಟೇಕಾಫ್ ಆಗಿದ್ದ ವಿಮಾನ 8:50ಕ್ಕೆ ಮುಂಬೈನಲ್ಲಿ ಇಳಿಯಬೇಕಿತ್ತು. ಆದರೆ, ಟೇಕ್ ಆಫ್ ಆಗಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು, ಅದನ್ನು ಗುರುತಿಸಿದ ಪೈಲಟ್ ವಿಮಾನವನ್ನು ಮುಂಬೈಗೆ ಕೊಂಡೊಯ್ಯದೆ ಪುನಃ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೇ 8:30ಕ್ಕೆ ಇಳಿಸಿದ್ದಾರೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕರು ತಿಳಿಸಿದ್ದಾರೆ. ಈ ವಿಮಾನ ತುರ್ತು ಭೂಸ್ಪರ್ಶ ಮಾಡಿಲ್ಲ. ಸಹಜವಾಗಿಯೇ ಟರ್ಮಿನಲ್ ಗೆ ಬಂದು ಇಳಿದಿದೆ. ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ